ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಉತ್ಸವದ ಭಾಗವಾಗಿ ಒಎನ್‌ಜಿಸಿ- ಎಂಆರ್‌ಪಿಎಲ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಕೊನೆಯ ದಿನವಾದ ಭಾನುವಾರ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯಿತು. ಸಹಸ್ರಾರು ಮಂದಿ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಬಾನಗಲ ಹಾರಾಡುತ್ತಿದ್ದ ತರಹೇವಾರಿ ಗಾತ್ರ, ಚಿತ್ರ- ವಿಚಿತ್ರ ಗಾಳಿಪಟಗಳನ್ನು ವೀಕ್ಷಿಸಿ ಮುದಗೊಂಡರು.ಭಾನುವಾರವೂ ದೇಶ- ವಿದೇಶಗಳ ಗಾಳಿಪಟ ಹಾರಾಟಗಾರರು ಬಣ್ಣ ಬಣ್ಣದ ವಿನ್ಯಾಸಗಳುಳ್ಳ ವಿಶೇಷ ಗಾಳಿಪಟಗಳನ್ನು ಹಾರಿಸುತ್ತಾ ಆಕಾಶದಲ್ಲಿ ಚಿತ್ತಾರ ಮೂಡಿಸುತ್ತಿದ್ದರೆ, ಮಕ್ಕಳಾದಿಯಾಗಿ ಎಲ್ಲರಿಗೂ ಕಂಡು ಕೇಳರಿಯದ ಸಡಗರ. ಸಂಜೆ ವೇಳೆ ಕೆಲ ಕಾಲ ಸಾಧಾರಣ ಮಳೆಯಾದ ಹಿನ್ನೆಲೆಯಲ್ಲಿ ವಿದೇಶಿಗರು ಗಾಳಿ ಪಟ ಹಾರಾಟ ನಿಲ್ಲಿಸಿದರು. ಆದರೂ ಜನರ ಉತ್ಸಾಹ ರಾತ್ರಿ ವರೆಗೂ ಮುಂದುವರಿದಿತ್ತು.ಬೃಹತ್ ಗಾತ್ರದ ಚಿರತೆಯ ಗಾಳಿಪಟ ಒಂದೆಡೆಯಾದರೆ, ಕುದುರೆ, ಬಾತುಕೋಳಿ, ಹುಲಿ, ಹದ್ದು, ಆಕ್ಟೋಪಸ್ ಇತ್ಯಾದಿ ಪ್ರಾಣಿಗಳ ಆಕಾರದ ಗಾಳಿಪಟಗಳು ಗಮನ ಸೆಳೆದವು. ಟೀಮ್ ಮಂಗಳೂರು ತಂಡದ ಕಥಕ್ಕಳಿ ಶೈಲಿಯ ‘ಸಿಗ್ನೇಚರ್ ಗಾಳಿಪಟ’ ಆಕರ್ಷಣೆಯಾಗಿತ್ತು. ನೋಡಲು ಬಂದ ಪ್ರವಾಸಿಗರು ಫೋಟೊ, ವಿಡಿಯೊ, ಸೆಲ್ಫಿ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು.
ಗಾಳಿಪಟ ಕುಟುಂಬ ಇಲ್ಲಿದೆ:ಕಳೆದ 10 ವರ್ಷಕ್ಕೂ ಅಧಿಕ ಸಮಯದಿಂದ ವಿವಿಧ ದೇಶಗಳಲ್ಲಿನ ಗಾಳಿಪಟ ಉತ್ಸವದಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಮಂಗಳೂರಿಗೆ ಈ ಹಿಂದೆಯೂ ಬಂದಿದ್ದೆ. ಮಂಗಳೂರಿನಲ್ಲಿ ನನ್ನ ಗಾಳಿಪಟ ಕುಟುಂಬವೇ ಇದೆ. ಜ.20ರಂದು ಮಂಗಳೂರಿನಿಂದ ಬೈಕ್‌ನಲ್ಲಿ ಮುಂಬೈಗೆ ತೆರಳಿ ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ನಿರ್ಗಮಿಸಲಿದ್ದೇನೆ ಎಂದು ನೆದರ್‌ಲ್ಯಾಂಡ್‌ನ ಗಾಳಿಪಟ ಹಾರಾಟಗಾರ ರೇಮಂಡ್ ಗ್ರಾಫ್ ಹೇಳಿದರು.
ಮಂಗಳೂರಿಗೆ ಇದು ನಮ್ಮ ಪ್ರಥಮ ಭೇಟಿ. ಇಲ್ಲಿನ ಪ್ರಶಾಂತ ವಾತಾವರಣ, ಜನರ ಪ್ರೀತಿ ತುಂಬಾ ಹಿಡಿಸಿದೆ. ಇನ್ನು ಪ್ರತಿ ವರ್ಷ ಮಂಗಳೂರಿಗೆ ಭೇಟಿ ನೀಡುವ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದು ಪತಿಯೊಂದಿಗೆ ಗಾಳಿಪಟ ಹಾರಿಸುತ್ತಾ ಇಂಗ್ಲೆಡ್‌ನ ಕ್ಲೇರಾ ಸಂತಸ ವ್ಯಕ್ತಪಡಿಸಿದರು.ಗಾಳಿಪಟ ಉತ್ಸವದಲ್ಲಿ ಇಂಗ್ಲೆಂಡ್, ಜರ್ಮನಿ, ನೆದರ್‌ಲ್ಯಾಂಡ್, ಸ್ಟೋವೆನಿಯಾ, ಇಟೆಲಿ, ಇನ್ನೋನಿಯ, ಸ್ವೀಡನ್, ಇಂಡೋನೇಶಿಯಾ, ಪೋರ್ಚುಗಲ್ ಮಾತ್ರವಲ್ಲದೆ, ಒರಿಸ್ಸಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದಲೂ ಗಾಳಿಪಟ ಹಾರಾಟಗಾರರು ಆಗಮಿಸಿದ್ದರು. ರಾತ್ರಿಯವರೆಗೂ ಗಾಳಿಪಟಗಳು ವರ್ಣರಂಜಿತ ಚಿತ್ತಾರ ಮೂಡಿಸಿದ್ದವು.ಟ್ರಾಫಿಕ್ ಜ್ಯಾಮ್:ಭಾನುವಾರ ರಜಾ ದಿನವಾದ ಕಾರಣ ನಗರವಾಸಿಗಳು, ಪ್ರವಾಸಿಗರು ಕುಟುಂಬ ಸಮೇತ ಗಾಳಿಪಟ ಉತ್ಸವ ವೀಕ್ಷಿಸಲು ಆಗಮಿಸಿದ್ದರು. ತಣ್ಣೀರುಬಾವಿ ಬೀಚ್ ರಸ್ತೆ ಅಗಲ ಕಿರಿದಾಗಿರುವುದರಿಂದ ಸಂಜೆ ವೇಳೆ ವಾಹನ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಟ್ರಾಫಿಕ್ ಸಮಸ್ಯೆ ನೀಗಿಸಲು ಸಿಬ್ಬಂದಿ ಹರಸಾಹಸ ಪಟ್ಟರು.