ಫ್ಲೈ ಓವರ್‌; 2 ತಿಂಗಳು ಹೊಸೂರ ವೃತ್ತ ಬಂದ್‌!

KannadaprabhaNewsNetwork |  
Published : Dec 02, 2025, 02:15 AM IST
ಮದಮದಮ | Kannada Prabha

ಸಾರಾಂಶ

ಫ್ಲೈಓವರ್ ಕಾಮಗಾರಿಯನ್ನು 2026 ಏಪ್ರಿಲ್ ಮೊದಲ ವಾರದೊಳಗಾಗಿ ಪೂರ್ಣಗೊಳಿಸಬೇಕಿದೆ. ಧಾರವಾಡದಿಂದ ಹುಬ್ಬಳ್ಳಿಗೆ ಬರುವ ಮಾರ್ಗ ಹೊರತುಪಡಿಸಿ ಇಲ್ಲಿಯ ಹೊಸೂರ ವೃತ್ತವನ್ನು 2 ತಿಂಗಳು ಸಂಪೂರ್ಣ ಬಂದ್ ಮಾಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹುಬ್ಬಳ್ಳಿ:

ಫ್ಲೈ ಓವರ್‌ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಇಲ್ಲಿನ ಹೊಸೂರ ವೃತ್ತವನ್ನು 2 ತಿಂಗಳು ಬಂದ್‌ ಮಾಡಲು ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಫ್ಲೈಓವರ್ ಕಾಮಗಾರಿಯನ್ನು 2026 ಏಪ್ರಿಲ್ ಮೊದಲ ವಾರದೊಳಗಾಗಿ ಪೂರ್ಣಗೊಳಿಸಬೇಕಿದೆ. ಧಾರವಾಡದಿಂದ ಹುಬ್ಬಳ್ಳಿಗೆ ಬರುವ ಮಾರ್ಗ ಹೊರತುಪಡಿಸಿ ಇಲ್ಲಿಯ ಹೊಸೂರ ವೃತ್ತವನ್ನು 2 ತಿಂಗಳು ಸಂಪೂರ್ಣ ಬಂದ್ ಮಾಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಹೊಸೂರು ಬಿಆರ್‌ಟಿಎಸ್ ಬಸ್ ನಿಲ್ದಾಣ ತೆರವುಗೊಳಿಸಿ ಎರಡು ಬದಿಯಲ್ಲಿ ಫಿಲ್ಲರ್ ಸ್ಥಾಪಿಸಿ ಗರ್ಡರ್ ಕೂಡ ಲಾಂಚ್ ಮಾಡಬೇಕಿದೆ. ಹೀಗಾಗಿ ಬಸ್ ನಿಲ್ದಾಣ ತೆರವು ಅನಿವಾರ್ಯವಾಗಿದೆ. ಅದಕ್ಕೆ ಪರ್ಯಾಯ ಮತ್ತು ತಾತ್ಕಾಲಿಕ ಬಸ್ ನಿಲ್ದಾಣ ಸ್ಥಾಪನೆ ಹಾಗೂ ಮಾರ್ಗ ಬದಲಾವಣೆ ಬಗ್ಗೆ ವಾಯವ್ಯ ಸಾರಿಗೆ ಸಂಸ್ಥೆ, ಬಿಆರ್‌ಟಿಎಸ್‌ ಹಾಗೂ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಎರಡ್ಮೂರು ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೊಸೂರ ಸರ್ಕಲ್ ಭಾಗಶಃ ಬಂದ್ ಮಾಡುವ ಬಗ್ಗೆ ಅಧಿಕಾರಿಗಳ ನೀಡುವ ವರದಿ ಆಧರಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಮಾರ್ಗ ಬದಲಾವಣೆ, ಬಸ್ ನಿಲ್ದಾಣದ ಸಮಗ್ರ ಮಾಹಿತಿಯನ್ನು ಜನರಿಗೆ ನೀಡಲಾಗುವುದು. ಇದೇ ವೇಳೆ ಕಾಮಗಾರಿ ಆರಂಭಿಸುವ ಬಗ್ಗೆ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ಮಾಡಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಈಗಾಗಲೇ ಹೊಸೂರು ಸರ್ಕಲ್‌ನಿಂದ ಚೆನ್ನಮ್ಮ ವೃತ್ತದ ವರೆಗಿನ ಫ್ಲೈಓವರ್ ಕಾಮಗಾರಿ ಬಹುತೇಕ ಮುಗಿದಿದೆ. ಬಹುಮುಖ್ಯವಾಗಿ ಹೊಸೂರ ವೃತ್ತದ ಕಾಮಗಾರಿ ಆಗಬೇಕಿದೆ. ಈ ನಿಟ್ಟಿನಲ್ಲಿ ಇದಕ್ಕೆ 60 ದಿನದ ಕಾಲಾವಕಾಶ ನೀಡಿದರೆ, ವೃತ್ತದಲ್ಲಿನ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ಪ್ರದೀಪ ಮಾತನಾಡಿ, ಗದಗ ರಸ್ತೆ, ವಿಜಯಪುರ ಸಂಪರ್ಕದ ಫ್ಲೈಓವರ್ ಕಾಮಗಾರಿ ಪ್ರಾರಂಭಿಸಬೇಕಿದೆ. ಆದರೆ, ಉಪನಗರ ಪೊಲೀಸ್ ಠಾಣೆ ಸ್ಥಳಾಂತರವಾಗಿಲ್ಲ. ಹೀಗಾಗಿ ಗದಗ ರಸ್ತೆಯ ಕಾಮಗಾರಿ ಪ್ರಾರಂಭಿಸಲು ತೊಂದರೆಯಾಗಿದೆ. ಇನ್ನು ವಿಜಯಪುರ ರಸ್ತೆ ಕಾಮಗಾರಿ ಬಹುತೇಕ ಮುಗಿದಿದ್ದು, ಇಳಿಜಾರಿನಲ್ಲಿ ರಸ್ತೆ ಜೋಡಣೆ ಮಾತ್ರ ಆಗಬೇಕಿದೆ ಎಂದು ಮಾಹಿತಿ ನೀಡಿದರು.

ಆಗ ಶಾಸಕ ಹಾಗೂ ಜಿಲ್ಲಾಧಿಕಾರಿ, ಜು. 30ಕ್ಕೆ ಸ್ಥಳಾಂತರಿಸುವ ಭರವಸೆ ನೀಡಿದ್ದೀರಿ, ಈ ವರೆಗೂ ಆಗಿಲ್ಲ ಎಂದರೆ ಏನರ್ಥ? ಕೂಡಲೇ ಸ್ಥಳಾಂತರಕ್ಕೆ ಕ್ರಮವಹಿಸಬೇಕು ಮತ್ತು ಎಷ್ಟು ದಿನದಲ್ಲಿ ಸ್ಥಳಾಂತರ ಮಾಡುತ್ತೀರಿ ಎಂದುದನ್ನು ಸ್ಪಷ್ಟಪಡಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗ ಎಸಿಪಿ ವೀರೇಶ, ಉಪನಗರ ಠಾಣೆ ಸಮುಚ್ಚಯದಲ್ಲಿನ 4 ಕಚೇರಿ ಪೈಕಿ 3 ಕಚೇರಿ ಸ್ಥಳಾಂತರವಾಗಿದೆ. ಇನ್ನುಳಿದಂತೆ ವಾಕಿ-ಟಾಕಿ ಎಂಟೇನ್ ಮತ್ತು 1 ಕಚೇರಿ ಸ್ಥಳಾಂತರಕ್ಕೆ ಟೆಂಡರ್ ಕರೆಯಲಾಗಿದ್ದು, ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಸ್ಥಳಾಂತರಕ್ಕೆ ಕ್ರಮವಹಿಸಿ ಕಾಮಗಾರಿಗೆ ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಹುಬ್ಬಳ್ಳಿ ಶಹರ ತಹಸೀಲ್ದಾರ ಮಹೇಶ ಗಸ್ತಿ ಸೇರಿದಂತೆ ಇತರರು ಇದ್ದರು. ಧೂಳು ನಿಯಂತ್ರಣ:

ಧೂಳು ತಡೆಗಟ್ಟಲು ನೀರು ಸಿಂಪರಣೆ ಮಾಡಲಾಗುತ್ತಿದೆಯಾದರೂ, ವಾಹನಗಳ ಓಡಾಟದಿಂದ ಪುನಃ ಒಣಗಿ ಧೂಳು ಹೆಚ್ಚಾಗುತ್ತಿದೆ. ಸದ್ಯ ಐಟಿ ಪಾರ್ಕ್, ಕೋರ್ಟ್ ಸರ್ಕಲ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶವಿದೆ. ಸಂಪೂರ್ಣವಾಗಿ ಸಿಸಿ ರಸ್ತೆ ನಿರ್ಮಿಸುವ ಉದ್ದೇಶದಿಂದ ಎನ್‌ಎಚ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತಿಲ್ಲ. ಇನ್ನೂ ಕೆಲವೆಡೆ ಗರ್ಡರ್ ಏರಿಸಬೇಕಿದ್ದು, ಯಂತ್ರಗಳ ಓಡಾಟದಿಂದ ಪುನಃ ಹದಗೆಟ್ಟು ಹೋಗುತ್ತವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ಪ್ರದೀಪ ಹೇಳಿದರು. ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಅವಕಾಶ ಇರುವ ಕಡೆ ಪಾಲಿಕೆಯಿಂದ ರಸ್ತೆ ನಿರ್ಮಾಣ ಮಾಡುತ್ತೇವೆ. ಎನ್‌ಎಚ್‌ನಿಂದ ಅನುದಾನ ಬಂದ ನಂತರ ಪಾಲಿಕೆಗೆ ಈ ಮೊತ್ತ ಪಾವತಿಸಬೇಕು ಎಂದು ಕೇಳಿದರು. ಆದರೆ, ಈ ಬಗ್ಗೆ ಗ್ಯಾರಂಟಿ ಇಲ್ಲ ಎಂದು ಎನ್‌ಎಚ್ ಅಧಿಕಾರಿ ಹೇಳಿದರು. ಆಗ ಶಾಸಕ ಟೆಂಗಿನಕಾಯಿ, ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸಿ ಸಿಸಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳಿಯನ್ನೂ ಲೆಕ್ಕಿಸದೆ ಅಂಗನವಾಡಿ ನೌಕರರ ಪ್ರತಿಭಟನೆ
ಕಳೆದ 6 ತಿಂಗಳಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕ ನಂ.2