ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ಗಣೇಶೋತ್ಸವ ಮೆರವಣಿಗೆಗೆ ಅಡ್ಡಿಯಾಗಲಿದ್ದು, ಆ ಸಂದರ್ಭದಲ್ಲಿ ಫ್ಲೈಓವರ್ ಕಾಮಗಾರಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹಳೇಬಸ್ ನಿಲ್ದಾಣದ ಮಾರ್ಗವಾಗಿ ಮೆರವಣಿಗೆ ನಡೆಸಲು ಅನುಕೂಲ ಮಾಡುವುದರ ಜತೆಗೆ ಅಲ್ಲಿನ ರಸ್ತೆ ಸುಧಾರಣೆಗೆ ಕ್ರಮವಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿತು.
ಇಲ್ಲಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಸೋಮವಾರ ನಡೆದ ಗಣೇಶೋತ್ಸವ ಸಿದ್ಧತೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಗಣೇಶೋತ್ಸವದ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಅವರು ವಿಷಯವನ್ನು ಪ್ರಸ್ತಾಪಿಸಿ, ಗಣೇಶೋತ್ಸವದಲ್ಲಿ ಬೃಹತ್ ಆಕಾರದ ಗಣೇಶಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ, ಫ್ಲೈಓವರ್ ಕಾಮಗಾರಿ ಅವುಗಳ ಮೆರವಣಿಗೆಗೆ ಅಡ್ಡಿಯಾಗಲಿದೆ. ಅದಕ್ಕಾಗಿ ಹಬ್ಬದ ಸಂದರ್ಭದಲ್ಲಿ ಕಾಮಗಾರಿ ಸ್ಥಗಿತಗೊಳಿಸುವುದು ಸೂಕ್ತ ಎಂದರು.ಅಷ್ಟೇ ಅಲ್ಲದೇ ಮಾರ್ಕೆಟ್ ಪ್ರದೇಶದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮಂಡಳಗಳು, ಅನ್ನದಾಸೋಹ ನಡೆಸುತ್ತವೆ. ಹೀಗಾಗಿ, ಸಾರ್ವಜನಿಕರ ಅನುಕೂಲ ದೃಷ್ಟಿಯಿಂದ ಜೀರೋ ಟ್ರಾಫಿಕ್ ಮಾಡಬೇಕು. ಸೌಂಡ್ ಸಿಸ್ಟ್ಂ ಅವಧಿಯನ್ನು 12ರ ವರೆಗೆ ವಿಸ್ತರಿಸಬೇಕು ಎಂದು ಮಹಾನಗರ ಪಾಲಿಕೆಗೆ ಹಿಪ್ಪರಗಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಈ ನಿಟ್ಟಿನಲ್ಲಿ ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಅಗತ್ಯ ಸೌಕರ್ಯ: ಗಣೇಶೋತ್ಸವ ಆಚರಣೆಗೆ ಪೂರಕ ವ್ಯವಸ್ಥೆ ಕಲ್ಪಿಸಲು ಹು-ಧಾ ಮಹಾನಗರ ಪಾಲಿಕೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ವಲಯಾಧಿಕಾರಿಗಳು ಅವರ ವ್ಯಾಪ್ತಿಯ ಪಾಲಿಕೆ ಸದಸ್ಯರು ಮತ್ತು ಗಣೇಶೋತ್ಸವ ಮಂಡಳಿಯ ಬೇಡಿಕೆಯ ಪಟ್ಟಿ ನೀಡಿದ್ದಾರೆ. ಅದರನ್ವಯ ವಿಜೃಂಭಣೆಯ ಗಣೇಶೋತ್ಸವಕ್ಕೆ ಅಗತ್ಯ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಹೆಸ್ಕಾಂ, ಪರಿಸರ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಸೇರಿದಂತೆ ಅಧಿಕಾರಿಗಳೊಂದಿಗೆ ಎರಡ್ಮೂರು ಸಭೆ ನಡೆಸಲಾಗಿದೆ. ಆ ಮೂಲಕ ಗಣೇಶೋತ್ಸವ ಆಚರಣೆ ತೊಡಕಾಗುವ ವಿದ್ಯುತ್ ತಂತಿ, ಮರಗಿಡ ತೆರವುಗೊಳಿಸುವುದು, ಅಗತ್ಯ ವಿದ್ಯುತ್ ಪೂರೈಕೆ, ಬೀದಿ ದೀಪಗಳ ಅಳವಡಿಕೆ, ಬಾವಿ ಶುಚಿಗೊಳಿಸಿ ಅಗತ್ಯ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ. ಗಣೇಶೋತ್ಸವ ಮಂಡಳಿಗಳು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಮತ್ತು ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆ ತ್ವರಿತವಾಗಿ ಪರವಾನಗಿ ನೀಡಲು ಏಕಗಾವಾಕ್ಷಿ ವ್ಯವಸ್ಥೆ ರೂಪಿಸಲಾಗಿದೆ. ಇದಕ್ಕಾಗಿ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಕಚೇರಿ ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರದಿಂದಲೇ ಕಾರ್ಯಾರಂಭ ಮಾಡಲಿವೆ. ಗಣೇಶೋತ್ಸವ ಹಿನ್ನೆಲೆಯಲ್ಲಿ ಬಾವಿ ಶುಚಿಗೊಳಿಸುವ, ಬಾವಿ ಸುತ್ತಲು ಪೆಂಡಾಲ್, ಅಲಂಕಾರ, ರಸ್ತೆ, ವಿದ್ಯುತ್, ಕ್ರೇನ್ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಮಹಾಮಂಡಳ ಉಪಾಧ್ಯಕ್ಷ ಶಾಂತರಾಜ ಪೋಳ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ೪೫೦ ಹೆಚ್ಚು ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗುತ್ತವೆ. ದೊಡ್ಡ ಪ್ರಮಾಣದ ಗಣೇಶ ಮೂರ್ತಿಗಳ ವಿಸರ್ಜನೆ ತೊಂದರೆ ಆಗಲಿದ್ದು, ಹೈಡ್ರೋಲಿಕ್ ಮತ್ತು ಕ್ರೇನ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸಂಸ್ಥೆಯಲ್ಲಿ ಉಪಮೇಯರ್ ಸಂತೋಷ ಚವ್ಹಾಣ, ಪಾಲಿಕೆ ವಿಪಕ್ಷ ನಾಯಕ ಇಮ್ರಾನ್ ಯಲಿಗಾರ, ಅಲ್ತಾಫ್ ಕಿತ್ತೂರ, ಪಾಲಿಕೆ ಎಂಜಿನೀಯರ್ ವಿಜಯಕುಮಾರ ಆರ್., ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಗದೀಶ, ಅಗ್ನಿಶಾಮಕ ದಳದ ಗೋವಿಂದ ತೋರಣಗಟ್ಟಿ, ಉಪನಗರ ಠಾಣೆ ಪಿಐ ಎಂ.ಎಸ್. ಹೂಗಾರ ಸೇರಿದಂತೆ ಇತರರು ಇದ್ದರು.
ಪಿಒಪಿ ಗಣೇಶ ಮೂರ್ತಿ ತಡೆಗೆ ಕ್ರಮ: ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ತಡೆಗಟ್ಟಲು ಎಲ್ಲಿ ಮೂರ್ತಿಗಳನ್ನು ಖರೀದಿಸುವ ಮಾಹಿತಿಯುಳ್ಳ ವೋಚರ್ ಅಥವಾ ರಸೀದಿ ಪಡೆದು ಪರವಾನಗಿ ನೀಡಲಾಗುತ್ತಿದೆ. ಇದಕ್ಕೆ ಗಣೇಶೋತ್ಸವ ಮಂಡಳಿಗಳು ಸಹಕಾರ ನೀಡಬೇಕು. ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ತಡೆಗಟ್ಟಲು ಈಗಾಗಲೇ ಪ್ರತಿ ಜೋನಲ್ ವ್ಯಾಪ್ತಿಯಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಹೊರರಾಜ್ಯದಿಂದ ಬರುವ ಪಿಒಪಿ ಗಣೇಶ ಮೂರ್ತಿಗಳ ತಡೆಗೆ ಜಿಲ್ಲೆಯ ಗಡಿಯಲ್ಲಿ ನಾಕಾಬಂಧಿ ಹಾಕಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ, ಮಣ್ಣಿನ ಗಣೇಶ ಮೂರ್ತಿ ಸ್ಥಾಪಿಸಬೇಕು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮನವಿ ಮಾಡಿದರು.ಓಣಿ ಬಾವಿ ಶುಚಿಗೆ ಆಗ್ರಹ: ಮನೆ ಮನೆ ಗಣೇಶ ಮೂರ್ತಿ ವಿಸರ್ಜನೆಗೆ ಆಯಾ ಓಣಿಯಲ್ಲಿರುವ ಬಾವಿ ಶುಚಿಗೊಳಿಸಿ ವಿಸರ್ಜನೆಗೆ ಅವಕಾಶ ಕಲ್ಪಿಸಬೇಕು. ಇನ್ನು ಇಕ್ಕಟ್ಟಾದ ದಾಜೀಬಾನಪೇಟೆ ಮಾರ್ಗವಾಗಿ ಮೆರವಣಿಗೆ ಬರುತ್ತವೆ. ಅಲ್ಲಿ ಸೂಕ್ತ ಫುಟ್ಪಾತ್ ಇಲ್ಲದೇ, ಮೆರವಣಿಗೆ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಆ ಮಾರ್ಗದ ಬದಲಿಗೆ ಕೊಪ್ಪಿಕರ ರಸ್ತೆ ಮಾರ್ಗವಾಗಿ ಮೆರವಣಿಗೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಆನಂದ ಸೋಮಶೇಖರ ಸಲಹೆ ಮಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಸ್ಥಾಪನೆ ಮಂಡಳಿಗಳಿಗೆ ಸಾಕಷ್ಟು ನಿಬಂಧನೆ ಹಾಕಲಾಗಿದೆ. ಇದರಿಂದ ಹಬ್ಬಕ್ಕೆ ತೊಂದರೆ ಆಗುತ್ತಿದ್ದು, ನಿಬಂಧನೆಗಳನ್ನು ಸಡಿಲಗೊಳಿಸಬೇಕು. ಮೆರವಣಿಗೆಯಲ್ಲಿ ಸೌಂಡ್ ಸಿಸ್ಟೆಮ್ ಹಚ್ಚಲು ಇರುವ ಅವಧಿಯನ್ನು ಅಪರಿಮಿತಗೊಳಿಸಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಹೇಳಿದರು.