ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದ ವಿದ್ಯಾನಗರದಲ್ಲಿ ಗುರುವಾರ ಭದ್ರಾವತಿ ಆಕಾಶವಾಣಿಗೆ ನೂತನವಾಗಿ ಅಳವಡಿಸಲಾದ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಭದ್ರಾವತಿ ಆಕಾಶವಾಣಿಗೆ ಇದೊಂದು ಉಡುಗೊರೆಯಾಗಿದ್ದು, ಜಿಲ್ಲೆಯ ಮೂಲೆ ಮೂಲೆ ಸೇರಿದಂತೆ 8 ಜಿಲ್ಲೆಗಳನ್ನು ತಲುಪಲಿದೆ. ರೇಡಿಯೋ ಒಂದು ಶಕ್ತಿಯುತವಾದ ಸಂವಹನ ಮಾಧ್ಯವಾಗಿದ್ದು, ಕೇಂದ್ರ ಸರ್ಕಾರವು ಡಿಜಿಟಲ್ ಮತ್ತು ಸಂವಹನ ಮಾಧ್ಯಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಗುಣಮಟ್ಟ ವೃದ್ದಿಗಾಗಿ ರು.2000 ಕೋಟಿ ಖರ್ಚು ಮಾಡುತ್ತಿದೆ ಎಂದರು.
ರೇಡಿಯೋ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತಿ ಹೆಚ್ಚು ಜನರನ್ನು ತಲುಪುತ್ತಿದ್ದು, ಶೇ.92 ಭಾಗವನ್ನು ತಲುಪುತ್ತಿರುವ ಬಹುದೊಡ್ಡ ಪ್ರಸಾರ ಮಾಧ್ಯಮವಾಗಿದೆ. ಕೇಂದ್ರವು ಕಲೆ, ಸಂಸ್ಕೃತಿ, ವಿನ್ಯಾಸ, ಚಲನಚಿತ್ರ, ಸಂಗೀತ, ಸಾಫ್ಟ್ವೇರ್ ಮತ್ತು ಗೇಮಿಂಗ್‌ನಂತಹ ಸೃಜನಶೀಲ ಉದ್ಯಮಗಳನ್ನು ಒಳಗೊಂಡಿರುವ ಆರ್ಥಿಕ ವ್ಯವಸ್ಥೆ ‘ಆರೆಂಜ್ ಎಕಾನಮಿಗೆ ಹೆಚ್ಚಿನ ಒತ್ತು ನೀಡುತ್ತಿದೆ. 25 ಸಾವಿರ ಶಾಲೆಗಳಿಗೆ ಕ್ರಿಯೇಟಿವ್ ಲ್ಯಾಬ್‌ನ್ನು ನೀಡುತ್ತಿದೆ ಎಂದರು.ರೇಡಿಯೋ 23 ಭಾಷೆಗಳು ಮತ್ತು 182 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ಗಡಿನಾಡು, ಗುಡ್ಡಗಾಡು, ಮತ್ತು ದೂರದ ಪ್ರದೇಶಗಳನ್ನು ತಲುಪುತ್ತಿದೆ. ಎಲ್ಲ ವರ್ಗ ಮತ್ತು ವಯೋಮಾನ ಹಾಗೂ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಬಿತ್ತರವಾಗುತ್ತವೆ. ಆಕಾಶವಾಣಿ ಪಾಡ್‌ಕಾಸ್ಟ್ ಸಹ ಶುರುವಾಗಿದ್ದು, ಕಮ್ಯುನಿಟಿ ರೇಡಿಯೋ ಸಹ ಬಹು ದೊಡ್ಡ ಪಾತ್ರ ವಹಿಸುತ್ತಿದೆ. 550 ಕಮ್ಯುನಿಟಿ ರೇಡಿಯೋ ಕೆಲಸ ಮಾಡುತ್ತಿದೆ. ಭದ್ರಾವತಿ ಆಕಾಶವಾಣಿ ಎಫ್ ಎಂ 25ನೇ ಪ್ರೇಷಕವಾಗಿದ್ದು, 3500 ಚ ಕಿ.ಮೀ ನ್ನು ಕವರ್ ಮಾಡುತ್ತದೆ.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಆಕಾಶವಾಣಿಯು ಆರಂಭಿಕ ಹಂತದಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಡಿಜಿಟಲ್ ಮತ್ತು ಸಂವಹನ ಕ್ರಾಂತಿಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಸಂಪೂರ್ಣ ಕನ್ನಡಿಗರನ್ನು ತಲುಪುವ ಏಕೈಕ ಕೇಂದ್ರವಾಗಿ ಭದ್ರಾವತಿ ಆಕಾಶವಾಣಿ ಹೊರಹೊಮ್ಮಿದೆ. ವಿದ್ಯಾನಗರದ 150 ಮೀಟರ್ ದೂರದರ್ಶನ ಟವರ್‌ನ್ನು ಬಳಕೆ ಮಾಡಿಕೊಂಡು 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ ಪ್ರೇಷಕ ಅಳವಡಿಸಲಾಗಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಎಫ್.ಎಂ ಪ್ರಸಾರಕ್ಕಾಗಿ ಶಿವಮೊಗ್ಗದ ಜನತೆ ಬಹಳ ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಎಫ್.ಎಂ. ಪ್ರೇಷಕದ ಅಳವಡಿಕೆಯು ಜನರಲ್ಲಿ ಸಂತೋಷ ತಂದಿದೆ. ನಿಗದಿತ ಸಮಯಕ್ಕೆ ಆರಂಭವಾಗುವ ಆಕಾಶವಾಣಿ ಕಾರ್ಯಕ್ರಮಗಳು ಎಲ್ಲರ ಮನೆ ಮಾತಾಗಿವೆ ಎಂದರು.ಆಕಾಶವಾಣಿ ಮಹಾ ನಿರ್ದೇಶಕ ರಾಜೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಕಾಶವಾಣಿ ಇದೀಗ ತಲುಪಲಾರದ ಪ್ರದೇಶಗಳನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಹಾಗೂ ಎಲ್ಲೆಡೆ ಮಾಹಿತಿ, ಶಿಕ್ಷಣ ಮತ್ತು ಮನೋರಂಜನೆಯನ್ನು ಒದಗಿಸುತ್ತಾ ಬಂದಿದ್ದು, ರಾಷ್ಟ್ರೀಯ ಐಕ್ಯತೆಯ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಪ ಶಾಸಕರಾದ ಡಾ.ಧನಂಜಯ ಸರ್ಜಿ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌರವ್ ದ್ವಿವೇದಿ, ಮಾಜಿ ಶಾಸಕ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ , ದಕ್ಷಿಣ ವಲಯ(ಬ್ರಾಡ್‌ಕಾಸ್ಟ್ ಆಪರೇಷನ್ಸ್)ದ ಅಪರ ಮಹಾ ನಿರ್ದೇಶಕಿ ಗೀತಾ ರಾಣಿ, ಆಕಾಶವಾಣಿ ಭದ್ರಾವತಿ ಮುಖ್ಯಸ್ಥ ಎಸ್. ಆರ್ ಭಟ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗೋಪಿನಾಥ್, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.