ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಡಿಎಆರ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ನೆರವೇರಿಸಿ ಮಾತನಾಡಿ, ಕರ್ತವ್ಯ ನಿರ್ವಹಣೆ ಮಾಡುವ ವೇಳೆ ನಾವು ನಮ್ಮ ವೈಯಕ್ತಿಕ ಸುಖದುಃಖಗಳು, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಕೊಡುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಕೂಡ ಕರ್ತವ್ಯ ಮಾಡುವ ಜೊತೆ ಜೊತೆಯಲ್ಲಿ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.
ಹುಟ್ಟಿದ ಮೇಲೆ ಸಾವು, ಇದು ಪ್ರಕೃತಿ ಮತ್ತು ದೇವರ ಇಚ್ಛೆ. ಆದರೆ, ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬುವುದು ಬಹಳ ಮುಖ್ಯ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವುದು ನಿಜಕ್ಕೂ ಪುಣ್ಯದ ಮತ್ತು ಗೌರವಯುತ ಕೆಲಸ ಎಂದರು.ದೇಶಕ್ಕಾಗಿ ಪ್ರಾಣ ಅರ್ಪಿಸಿದವರಿಗೆ ಅವರ ಅಂತಿಮ ದರ್ಶನದಲ್ಲಿ ಮೃತ ದೇಹದ ಮೇಲೆ ರಾಷ್ಟ್ರ ಧ್ವಜವನ್ನು ಇಟ್ಟು ಗೌರವ ಸಮರ್ಪಣೆ ಮಾಡುತ್ತಾರೆ. ಅದಕ್ಕಿಂತ ಬಹುದೊಡ್ಡ ಗೌರವ ಮತ್ತೊಬ್ಬ ವ್ಯಕ್ತಿಗೆ ಸಿಗುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಎಲ್ಲಾ ಹುತಾತ್ಮರನ್ನು ಸ್ಮರಿಸುತ್ತಾ ಅವರಿಗೆ ಗೌರವ ಸಮರ್ಪಣೆ ನೆರವೇರಿಸಿ ಮಾತನಾಡಿ, ಪ್ರಾಯಶಃ ಈ ಗೌರವ ಸಮರ್ಪಣೆ ಎನ್ನುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅಂತಹವರಿಗೆ ನಾವು ಗೌರವ ಸಲ್ಲಿಸಿದರೆ ನಮ್ಮ ದೇಶಕ್ಕೆ, ಸಂವಿಧಾನಕ್ಕೆ ಗೌರವ ಸಲ್ಲಿಸದಂತೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಈ ವರ್ಷದಲ್ಲಿ ಸುಮಾರು 213 ಪೊಲೀಸರು ಹುತಾತ್ಮರಾಗಿದ್ದಾರೆ. ಕಾರ್ಯ ನಿರ್ವಹಿಸುತ್ತಿರುವಂತಹ ಅನೇಕ ಸಿಬ್ಬಂದಿ ಕೂಡ ಈ ಸಮಾಜ ಸ್ವಾಸ್ತ್ಯವನ್ನು ಕಾಪಾಡುವದಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡಿರುತ್ತಾರೆ ಎಂದರು.
ಸೈನಿಕರು ದೇಶದ ಗಡಿಯಲ್ಲಿ ನಿಂತುಕೊಂಡು ನಮಗೆಲ್ಲ ರಕ್ಷಣೆ ಕೊಟ್ಟರೆ, ದೇಶದ ಒಳಗಡೆ ಇದ್ದು ದೇಶದ ರಕ್ಷಣೆ ಮಾಡುತ್ತಿರುವವರೇ ಆರಕ್ಷಕ ಸಿಬ್ಬಂದಿ ಇಂತಹ ಆರಕ್ಷರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಆರಕ್ಷಕರು ಕುಟುಂಬದಿಂದ ದೂರ ಇದ್ದು ಮಾನಸಿಕ ನೋವನ್ನು ಅನುಭವಿಸುತ್ತಾರೆ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡದೇ ಇರುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಈ. ತಿಮ್ಮಯ್ಯ, ಗಂಗಾಧರಸ್ವಾಮಿ, ಕಸಾಪ ಜಿಲ್ಲಾ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ನಗರಸಭೆ ಅಧ್ಯಕ್ಷರಾದ ಪ್ರಕಾಶ್ ಎಂ.ವಿ, ಉಪಾಧ್ಯಕ್ಷರಾದ ಅರುಣ್ ಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.