ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ, ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರಂತೆ ಜೀವನದಲ್ಲಿ ಉದ್ದೇಶ ಮತ್ತು ಗುರಿ ಹೊಂದಿರಬೇಕು. ಭಾರತವು ಇಡೀ ವಿಶ್ವದಲ್ಲಿ ತಾಯಿ ಇದ್ದಂತೆ. ಆಧ್ಯಾತ್ಮಿಕತೆಯಲ್ಲಿ ಸ್ವಾಮಿ ವಿವೇಕಾನಂದರು ವಿಶ್ವ ಪರ್ಯಟನೆ ಮಾಡಿ ಅಮೆರಿಕದ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಸಹೋದರ, ಸಹೋದರಿಯರೆ ಎಂದು ಉಚ್ಛರಿಸಿ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು.ಪ್ರಸ್ತುತ ಸಂದರ್ಭದಲ್ಲಿ ಹತ್ತಿರದವರನ್ನು ಸಹ ಸಹೋದರ/ ಸಹೋದರಿ ಎಂದು ಹೇಳಲು ಹಿಂಜರಿಯುತ್ತಾರೆ. ಅಂತದರಲ್ಲಿ ಸ್ವಾಮಿ ವಿವೇಕಾನಂದರು ವಿಶಾಲ ಮನೋಭಾವದಿಂದ ಎಲ್ಲರನ್ನು ಸಹೋದರ, ಸಹೋದರಿಯರು ಎಂದು ಸಂಭೋಧಿಸುವ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಇಡೀ ಜಗತ್ತಿಗೆ ಪರಿಚಯಿಸಿದರು ಎಂದು ಅನಂತಶಯನ ಅವರು ಸ್ಮರಿಸಿದರು.
ಸತತ ಪರಿಶ್ರಮವಿದ್ದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಬಹುದು. ಆ ನಿಟ್ಟಿನಲ್ಲಿ ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದರು ರಾಷ್ಟ್ರದಲ್ಲಿನ ಬಡತನ, ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಶಿಸ್ತಿನ ಬದುಕು ನಡೆಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಮಾತನಾಡಿ ವಿದ್ಯಾರ್ಥಿಗಳು ಪ್ರಥಮ ಆದ್ಯತೆಯಲ್ಲಿ ಪಠ್ಯಪುಸ್ತಕ ಅಧ್ಯಯನ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು.
ರಾಷ್ಟ್ರದಲ್ಲಿ ಯುವ ಜನರ ಸಂಖ್ಯೆ ಹೆಚ್ಚಿದ್ದು, ಯುವಜನರು ತಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ತಮ್ಮ ಕುಟುಂಬ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಸಮಾಜ ಚೆನ್ನಾಗಿದ್ದಲ್ಲಿ ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತದೆ. ಆ ನಿಟ್ಟಿನಲ್ಲಿ ಯುವಜನರು ಯೋಚಿಸಬೇಕು ಎಂದು ವಿ.ಟಿ.ವಿಸ್ಮಯಿ ಅವರು ನುಡಿದರು.
ಮೊಬೈಲ್ ಬಳಕೆಯಿಂದ ಮಾನಸಿಕವಾಗಿ ಮಕ್ಕಳು ಕುಗ್ಗುತ್ತಿದ್ದಾರೆ. ಸಮಾಜದಲ್ಲಿ ತಮ್ಮನ್ನು ತಾವು ಗೌರವಿಸಿಕೊಂಡು, ಇತರರನ್ನು ಗೌರವಿಸಲು ಮುಂದಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಹೇಳಿದರು.
ವಿದ್ಯಾರ್ಥಿಗಳು ಸೇರಿದಂತೆ ಉಪ ನ್ಯಾಸಕರು ಸಹ ಗ್ರಂಥಾಲಯ ಬಳಸಿಕೊಳ್ಳುವಂತಾಗಬೇಕು. ಗ್ರಂಥಾಲಯ ಅಧ್ಯಯನದಿಂದ ಹೆಚ್ಚಿನ ಜ್ಞಾನ ಸಂಪಾದಿಸಲು ಅನುಕೂಲವಾಗಲಿದೆ.
ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಉಪನ್ಯಾಸಕರಾದ ಚಿದಾನಂದ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಬಾಳಾಡಿ ದಿಲೀಪ್ ಕುಮಾರ್ ಇದ್ದರು.ಯುವ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಪಿ.ಪಿ.ಸುಕುಮಾರ್ ಅವರು ಸ್ವಾಗತಿಸಿದರು. ಯುವ ಒಕ್ಕೂಟದ ಸದಸ್ಯರಾದ ಸಾಬಾ ಸುಬ್ರಮಣಿ ನಿರೂಪಿಸಿದರು, ನವೀನ್ ದೇರಳ ವಂದಿಸಿದರು.