ಹಾವೇರಿ: ತಾಲೂಕಿನ ಹೊಸರಿತ್ತಿ ಬಳಿಯ ಡಾಬಾ ಒಂದರಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವ್ಯಕ್ತಿಯೊಬ್ಬರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಗಾಯಗೊಳಿಸಿರುವ ಆರೋಪ ಕೇಳಿ ಬಂದಿದೆ.
ಯಲ್ಲಪ್ಪ ಓಲೇಕಾರ ಹಲ್ಲೆಗೀಡಾದ ವ್ಯಕ್ತಿ.ನಾನು ನನ್ನ ಸ್ನೇಹಿತರೊಂದಿಗೆ ಭಾನುವಾರ ರಾತ್ರಿ ಡಾಬಾದಲ್ಲಿ ಊಟ ಮಾಡುತ್ತಿದ್ದೆ. ಈ ವೇಳೆ ಡಾಬಾಕ್ಕೆ ಬಂದ ಕಾನ್‌ಸ್ಟೆಬಲ್ ದೇವರಾಜ ತೋಟಗೇರ ನಿಧಾನವಾಗಿ ಜಗಳ ತೆಗೆದು ಬಿಯರ್ ಬಾಟಲಿಯಿಂದ ತಲೆಗೆ ರಕ್ತ ಬರುವಂತೆ ಜೋರಾಗಿ ಹೊಡೆದರು ಎಂದು ಯಲ್ಲಪ್ಪ ಆರೋಪಿಸಿದ್ದಾರೆ. ತಲೆಗೆ ಏಟು ಬಿದ್ದು ರಕ್ತಸ್ರಾವಗೊಂಡಿದ್ದ ಯಲ್ಲಪ್ಪ ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಕಪ್ ಡೆತ್ ಅನ್ನೇ ದಕ್ಕಿಸಿಕೊಂಡಿದ್ದೇನೆ...2023ರಲ್ಲಿ ಹೊಸರಿತ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದ ಲಾಕಪ್ ಡೆತ್ ಪ್ರಕರಣದ ಕುರಿತು ಕಾನ್‌ಸ್ಟೇಬಲ್ ದೇವರಾಜ ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಲಾಕಪ್ ಡೆತ್ ಮಾಡಿದ್ದನ್ನೇ ದಕ್ಕಿಸಿಕೊಂಡೇವಿ ನಾವು, ಅವ ಯಾವ ಲೆಕ್ಕ ತಗೋ ಎಂದು ಹಲ್ಲೆ ನಡೆಸಿದ್ದಾರೆ ಎಂದು ಯಲ್ಲಪ್ಪ ಆರೋಪಿಸಿದ್ದಾರೆ.
ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.ಮೆಕ್ಕೆಜೋಳದ ರಾಶಿ, ಬಣವೆಗಳಿಗೆ ಬೆಂಕಿ, ಅಪಾರ ಹಾನಿ:
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೆಕ್ಕೆಜೋಳದ ರಾಶಿ ಸೇರಿದಂತೆ ಬಣವೆಗಳು ಸುಟ್ಟು ಭಸ್ಮಗೊಂಡು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.ಗ್ರಾಮದ ದ್ಯಾಮಣ್ಣ ತಳವಾರ ಹಾಗೂ ಮೃತ್ಯುಂಜಯ ಹಿರೇಮಠ ಎಂಬುವರು ನಾಲ್ಕು ಮೆಕ್ಕೆಜೋಳದ ರಾಶಿ ಹಾಗೂ ೬ ಮೇವಿನ ಬಣವೆಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಟ್ಟು ಕರಕಲಾಗಿದ್ದು, ಸುಮಾರು ೧೦ ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳದ ತೆನೆಯ ರಾಶಿ ಸುಟ್ಟು ಭಸ್ಮಗೊಂಡಿದೆ. ಘಟನೆ ನಡೆಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಈ ವೇಳೆಗಾಲೇ ಅಪಾರ ಪ್ರಮಾಣದಲ್ಲಿ ಮೆಕ್ಕೆಜೋಳದ ರಾಶಿ ಅಗ್ನಿಆಹುತಿ ಆಗಿದ್ದರಿಂದ ಅಪಾರ ಹಾನಿ ಸಂಭವಿಸಿದೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.