ಕನ್ನಡಪ್ರಭ ವಾರ್ತೆ ಯಾದಗಿರಿ
ನಮ್ಮ ದೇಶ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ, ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಪಿಡುಗಾದ ಬಾಲ್ಯವಿವಾಹ ಪ್ರಕರಣಗಳು ಇನ್ನು ಕಂಡು ಬರುತ್ತಿವೆ. ಕಾರಣ ಅಲ್ಲಿನ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಕಾರ್ಯಕರ್ತೆಯರು ಅದನ್ನು ತಡೆಯಲು ಹೆಚ್ಚು ಗಮನ ಹರಿಸಬೇಕೆಂದು ಗುರುಮಠಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಸಲಹೆ ನೀಡಿದರು.ನಗರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಗುರುಮಠಕಲ್ ಅವರ ಆಶ್ರಯದಲ್ಲಿ ನಡೆದ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿ ಮಾತನಾಡಿದರು.
ಗ್ರಾಮೀಣ ಜನತೆ ಅನಕ್ಷರಸ್ಥರಾಗಿದ್ದು, ಅವರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಮದುವೆ ಮಾಡುತ್ತಾರೆ. ಇದರಿಂದ ಅವರ ಆರೋಗ್ಯದ ಬೆಳವಣಿಗೆ ಮೇಲೆ ಕೆಟ್ಟ ಪರಿಣಾಮ ಬೀರಿ ಮಕ್ಕಳ ಹೆರಿಗೆ ಸಮಯದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಕೆಲ ಪ್ರಕರಣಗಳಲ್ಲಿ ಮಹಿಳೆಯರು ಸಾವನ್ನಪ್ಪಿರುವ ಘಟನೆಗಳು ಜರುಗಿವೆ. ಕಾರಣ ಕಾರ್ಯಕರ್ತೆಯರು ಅವರಲ್ಲಿ ಜಾಗೃತಿ ಮೂಡಿಸಿ, ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಲು ಮುಂದಾಗದಂತೆ ಎಚ್ಚರಿಕೆ ವಹಿಸಬೇಕು. ಜೊತೆಗೆ ಅಂತಹ ಸಂದರ್ಭಗಳು ಕಂಡು ಬಂದರೆ ಇಲಾಖೆ ಮೇಲಾಧಿಕಾರಿಗಳಿಗೆ ತಿಳಿಸಿ ಎಂದು ಹೇಳಿದರು.ಈಗಾಗಲೇ ಮತಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಅಗತ್ಯಕ್ಕನುಸಾರವಾಗಿ ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆ ನಿವೇಶನಗಳ ಕೊರತೆಯಿಂದ ಕಟ್ಟಡಗಳ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಸ್ಥಳೀಯರೊಂದಿಗೆ ಮಾತನಾಡಿ, ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಾಡುತ್ತಿರುವ ಕೆಲಸಗಳ ಮಾಹಿತಿ ಪಡೆಯಲು ಸರ್ಕಾರ ನಿಮಗೆ ಮೊಬೈಲ್‌ಗಳನ್ನು ನೀಡಿದೆ, ಅದರ ಸದ್ಬಳಕೆ ಮಾಡಿಕೊಂಡು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.ಈ ವೇಳೆ ಕಾರ್ಯಕ್ರಮದಲ್ಲಿ 60 ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಲಾಯಿತು. ಗುರುಮಠಕಲ್ ಸಿಡಿಪಿಒ ಶರಣಬಸವ ಇತರರಿದ್ದರು.