ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವತ್ತ ಇಂದಿನಿಂದಲೇ ಗಮನಕೊಡಿ: ಮೈಸೂರುಮಠ್‌ ಕರೆ

KannadaprabhaNewsNetwork |  
Published : Jun 06, 2025, 12:46 AM IST
6 | Kannada Prabha

ಸಾರಾಂಶ

ಇಂದಿನಿಂದಲೇ ಪ್ರತಿ ವಿದ್ಯಾರ್ಥಿಯು 10 ಪ್ಲಾಸ್ಟಿಕ್‌ ತುಂಡುಗಳನ್ನು ಸಂಗ್ರಹಿಸಿ, ಶಾಲೆಯಲ್ಲಿಡಬೇಕು. ಒಂದು ತಿಂಗಳ ನಂತರ ಅದನ್ನು ನಗರಪಾಲಿಕೆಯ ಅಧಿಕಾರಿಗಳನ್ನು ಕರೆಸಿ, ಹಸ್ತಾಂತರಿಸಬೇಕು. ಆ ಮೂಲಕ ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವತ್ತ ಇಂದಿನಿಂದಲೇ ಗಮನನೀಡಿ ಎಂದು ಪರಿಸರವಾದಿ ವಸಂತಕುಮಾರ್‌ ಮೈಸೂರುಮಠ್‌ ಕರೆ ನೀಡಿದರು.

ನಗರದ ವಿ.ವಿ. ಮೊಹಲ್ಲಾದ ಮಾತೃಮಂಡಳಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್‌ ಮಣ್ಣಿನಲ್ಲಿ ಕರಗಲು ಸಾವಿರಾರು ವರ್ಷಗಳು ಬೇಕಾಗುತ್ತದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಪ್ಲಾಸ್ಟಿಕ್‌ ತ್ಯಜಿಸಿ, ಕಾಗದ ಹಾಗೂ ಬಟ್ಟೆಯ ಬ್ಯಾಗುಗಳನ್ನು ಬಳಸಿ ಎಂದು ಸಲಹೆ ಮಾಡಿದರು.

ಸರ್ಕಾರ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇಲ್ಲವೇ ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಇಂದಿನಿಂದಲೇ ಪ್ರತಿ ವಿದ್ಯಾರ್ಥಿಯು 10 ಪ್ಲಾಸ್ಟಿಕ್‌ ತುಂಡುಗಳನ್ನು ಸಂಗ್ರಹಿಸಿ, ಶಾಲೆಯಲ್ಲಿಡಬೇಕು. ಒಂದು ತಿಂಗಳ ನಂತರ ಅದನ್ನು ನಗರಪಾಲಿಕೆಯ ಅಧಿಕಾರಿಗಳನ್ನು ಕರೆಸಿ, ಹಸ್ತಾಂತರಿಸಬೇಕು. ಆ ಮೂಲಕ ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ ಮೂಡಿಸಬೇಕು ಎಂದರು.

83 ವರ್ಷದ ಮೈಸೂರುಮಠ್‌ ಅವರು ಎಚ್‌. ಡುಂಡಿರಾಜ್‌ ಅವರ ಪರಿಸರ ಗೀತೆಯನ್ನು ಹಾಡಿ, ಮಕ್ಕಳಿಂದಲೂ ಹೇಳಿಸಿ, ಕೊನೆಗೆ ಪರಿಸರ ಕಾಪಾಡುವ ಪ್ರತಿಜ್ಞೆ ಮಾಡಿಸಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಪರಿಸರ ಸಮತೋಲನ ಮುಖ್ಯ. ಪರಿಸರ ಉಳಿದರೆ ಕಾಡು- ನಾಡು ಉಳಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾತೃಮಂಡಳಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್‌ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು 90 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಮುಂದಿನ ಜುಲೈ ಅಥವಾ ಆಗಸ್ಟ್‌ನಲ್ಲಿ 90ನೇ ವರ್ಷಾಚರಣೆ ಏರ್ಪಡಿಸಲಾಗುತ್ತದೆ. ಅಕ್ಷರವಂಚಿತ ಪೋಷಕರ ಮಕ್ಕಳು ಇಲ್ಲಿ ಕಲಿತು ಉನ್ನತ ಶ್ರೇಣಿಯಲ್ಲಿ ಪಾಸಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಹೇಮಾ ಬಾಲಚಂದ್ರನ್‌ ಮಾತನಾಡಿ, ಚಾಕೋಲೇಟ್‌ ತಿನ್ನುವ ಮಕ್ಕಳು ಅದರ ಪ್ಲಾಸ್ಟಿಕ್‌ ಕವರನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅಲ್ಲಿಂದಲೇ ಪ್ಲಾಸ್ಟಿಕ್‌ ವಿರುದ್ಧದ ಜಾಗೃತಿಯ ಕೆಲಸ ಆಗಬೇಕು ಎಂದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅನಿತಾ ಸ್ವಾಗತಿಸಿದರು. ಪಿಯು ಕಾಲೇಜು ಪ್ರಾಂಶುಪಾಲೆ ಗಿರಿಜಮ್ಮ,. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಮಿತ್ರಾ ಇದ್ದರು. ಶೋಭಾ ನಿರೂಪಿಸಿದರು. ಮೀನಾ ಜೋಸೆಫ್‌ ಹಾಗೂ ರಮ್ಯಾ ಅತಿಥಿಗಳನ್ನು ಪರಿಚಯಿಸಿದರು. ಶ್ವೇತಾ ವಂದಿಸಿದರು. ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.

ಕಾವೇರಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಡಾ. ಚಂದ್ರಶೇಖರ್‌ ಫೌಂಡೇಷನ್‌ನ ಕಾವೇರಿ ಗ್ರೂಪ್‌ ಇನ್‌ಸ್ಟಿಟ್ಯೂಷನ್‌ ಕಾವೇರಿ ಆಯುರ್ವೇದಿಕ್‌ ಆಸ್ಪತ್ರೆ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಕಾವೇರಿ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ವಿವಿಧ ತಳಿಯ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿತ್ತು.

ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಹುಚ್ಚಯ್ಯ ಮತ್ತು ಫೌಂಡೇಷನ್‌ ಅಧ್ಯಕ್ಷ ಡಾ. ಚಂದ್ರಶೇಖರ್‌, ಕಾವೇರಿ ಸಮೂಹ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಡಾ. ಸರಳಾ ಚಂದ್ರಶೇಖರ್‌ ಇದ್ದರು.

ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿ ಮನೆಯಲ್ಲೂ ಕೂಡ ಕನಿಷ್ಠ 2 ಗಿಡಗಳನ್ನು ಬೆಳೆಸುವಂತೆ ಸಲಹೆ ನೀಡಿದರು. ಮೈಸೂರು ನಗರವನ್ನು ಸ್ವಚ್ಛತೆಯಲ್ಲಿ ದೇಶಕ್ಕೆ ಮೊದಲ ಸ್ಥಾನಕ್ಕೆ ಏರಿಸಲು ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ತಿಲಿಸಿದರು.

ಕಾವೇರಿ ಸಮೂಹ ವಿದ್ಯಾಸಂಸ್ಥೆಗಳ ಹಿರಿಯ ಅಧಿಕಾರಿಗಳು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ