ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗೆಲ್ಲುವತ್ತ ಗಮನ ಹರಿಸಿ

KannadaprabhaNewsNetwork |  
Published : Feb 24, 2026, 02:30 AM IST
ಐಎಎಸ್, ಐಪಿಎಸ್ ಕಾನ್ವೆಂಟ್‌ನಲ್ಲಿ ಓದಿದವರ, ನಗರವಾಸಿಗಳ ಸ್ವತ್ತಲ್ಲ : ಎಸಿ ಸಪ್ತಶ್ರೀ | Kannada Prabha

ಸಾರಾಂಶ

ಐಎಎಸ್, ಐಪಿಎಸ್ ಅಥವಾ ಇನ್ನಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಗೆಲ್ಲುವುದು ಅಸಾಧ್ಯವಲ್ಲ ಎಂದು ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಗ್ರಾಮೀಣ ಭಾಗದ ಹಾಗೂ ಕನ್ನಡಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ನಾನೇನಾಗಬೇಕು ಎಂಬ ಗುರಿ, ಶ್ರದ್ಧೆ ಮತ್ತು ಪ್ರಾಮಾಣಿಕ ಪ್ರಯತ್ನ ಇಟ್ಟುಕೊಂಡು ನಿರಂತರ ಅಭ್ಯಾಸ ಮಾಡಿದಲ್ಲಿ ಐಎಎಸ್, ಐಪಿಎಸ್ ಅಥವಾ ಇನ್ನಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಗೆಲ್ಲುವುದು ಅಸಾಧ್ಯವಲ್ಲ ಎಂದು ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ತಿಳಿಸಿದರು.

ನಗರದ ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಮೆಟ್ರಿಕ್ ನಂತರದ ವಸತಿ ನಿಲಯಗಳ ನಿಲಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಐಎಎಸ್, ಐಪಿಎಸ್ ಪಾಸ್ ಮಾಡುವುದು ಕೇವಲ ಇಂಗ್ಲಿಷ್‌ ಕಾನ್ವೆಂಟ್‌ಗಳಲ್ಲಿ ಓದುತ್ತಿರುವ ಅಥವಾ ದೊಡ್ಡ ದೊಡ್ಡ ನಗರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಮಾತ್ರವಲ್ಲ. ನಿರ್ದಿಷ್ಟ ಗುರಿ ಇರಿಸಿಕೊಂಡು ನಿರಂತರ ಅಭ್ಯಾಸ ಮಾಡುವುದನ್ನು ಮುಂದುವರಿಸಿದಲ್ಲಿ ಯಾವುದೂ ಅಸಾಧ್ಯವಲ್ಲ. ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಇದು ಖಂಡಿತ ಸಾಧ್ಯ ಎಂಬುದು ಈಗಾಗಲೇ ಅನೇಕ ಕಡೆ ದೃಢಪಟ್ಟಿದ್ದು ನೀವು ಸಹ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಗೆಲುವು ಸಾಧಿಸಬೇಕು. ಸರ್ಕಾರ ಬಿಸಿಎಂ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ. ಅದಕ್ಕಾಗಿ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ತೇರ್ಗಡೆ ಹೊಂದಿದವರಿಗೆ ಉಚಿತವಾಗಿ ದೆಹಲಿ, ಬೆಂಗಳೂರು ಅಥವಾ ಹೈದರಾಬಾದ್‌ಗೆ ಕಳುಹಿಸಿ ತರಬೇತಿ ನೀಡುತ್ತದೆ. ವಸತಿಯನ್ನೂ ಉಚಿತವಾಗಿ ನೀಡುತ್ತದೆ. ಇದೆಲ್ಲದರ ಮಾಹಿತಿ ಪಡೆದುಕೊಂಡು ನಿಮ್ಮ ಕನಸುಗಳನ್ನು ಸಾಕಾರಪಡಿಸಿಕೊಳ್ಳುವತ್ತ ಮುನ್ನುಗ್ಗಿ. ನಾನೂ ಕೂಡ ಬಿಸಿಎಂ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳನ್ನು ಬಳಸಿಕೊಂಡೇ ಪರೀಕ್ಷೆ ಪಾಸ್ ಮಾಡಿ ಈ ಹುದ್ದೆಗೆ ಬಂದಿದ್ದೇನೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ಎಸ್‌ವಿಪಿ ಕಾಲೇಜು ಪ್ರಾಂಶುಪಾಲ ರೇಣುಕಯ್ಯ ಮಾತನಾಡಿ, ಇದು ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗ. ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿರುವ ನಾವೂ ವೇಗದ ಶಿಕ್ಷಣ ಪಡೆಯಬೇಕಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಯೂ ಇದೆ. ಅವಕಾಶಗಳೂ ಸಾಕಷ್ಟಿವೆ. ದೂರದೃಷ್ಠಿ ಇಟ್ಟುಕೊಂಡು ಅಭ್ಯಾಸ ಮಾಡಿ. ಪ್ರತಿದಿನ ದಿನಪತ್ರಿಕೆಗಳನ್ನು ಓದಿ. ವರ್ತನೆಗಳ ಪರಿವರ್ತನೆಯೇ ಶಿಕ್ಷಣ. ದಿ. ದೇವರಾಜ ಅರಸು ಅವರ ಚಿಂತನೆ ಮತ್ತು ದೂರದೃಷ್ಠಿಯಿಂದ ನೀವೆಲ್ಲಾ ಉತ್ತಮ ವಸತಿ ನಿಯಲಗಳಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆದುಕೊಂಡಿದ್ದೀರಿ. ಈ ಅನುಕೂಲಗಳನ್ನು ನಿಮ್ಮ ಭವಿಷ್ಯದ ಮೆಟ್ಟಿಲುಗಳನ್ನಾಗಿಸಿಕೊಂಡು ಅತ್ಯುನ್ನತ ಶ್ರೇಣಿಗಳಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿ ಎಂದರು.ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ ಮಾತನಾಡಿ, ಪದವಿ ಅಥವಾ ಇನ್ಯಾವುದೇ ಶಿಕ್ಷಣ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಮುಗಿದ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ ಹಾಗೂ ಇರುವ ಗೊಂದಲವನ್ನು ಪರಿಹರಿಸಲು ವಿದ್ಯಾರ್ಥಿಗಳಲ್ಲಿ ಮುಂದಿನ ಭವಿಷ್ಯದ ಬಗ್ಗೆ ಅರಿವು ಮೂಡಿಸಲು ಸರಕಾರ ಈ ಕಾರ್ಯಕ್ರಮವನ್ನು ಆಯೋಜಿಸಲು ಆದೇಶಿಸಿದೆ. ಆದ್ದರಿಂದ ಶಿಕ್ಷಣ ತಜ್ಞರು, ವೃತ್ತಿಪರರು, ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್, ಸಂಪನ್ಮೂಲ ವ್ಯಕ್ತಿಗಳಾದ ಪ್ರದೀಪ್, ನಿಂಗಪ್ಪ, ಬಿಸಿಎಂ ಇಲಾಖೆಯ ವಿಸ್ತರಣಾ ಅಧಿಕಾರಿ ರಾಜೀವ್ ಎಂ.ಎನ್. ಮಹೇಶ್, ಶೋಭಾ, ಸುಮಲತ, ಪ್ರಮೀಳ, ಮಮತ, ಬಸವರಾಜು, ಶಿವರಾಜ್ ಎಲೆಗಾರ್, ಕೆಂಪರಾಜು ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಯಕರ್ತರು ಒಪ್ಪಿದ್ದಲ್ಲಿ ಜೆಡಿಎಸ್‌ ಸೇರ್ಪಡೆ: ಹೂಡಿ ವಿಜಯಕುಮಾರ್‌
ಬೇಡನ್ ಪಾವೆಲ್ ಆದರ್ಶಗಳು ವ್ಯಕ್ತಿತ್ವ ನಿರ್ಮಾಣಕ್ಕೆ ದಾರಿದೀಪ