ಚನ್ನರಾಯಪಟ್ಟಣದ ಫೋಕಸ್ ಪಿಯು ಕಾಲೇಜಿಗೆ ಶೇ.೧೦೦ ಫಲಿತಾಂಶ ದಾಖಲು

KannadaprabhaNewsNetwork | Published : Apr 12, 2024 1:09 AM

ಸಾರಾಂಶ

ಚನ್ನರಾಯಪಟ್ಟಣದ ಕೇಂದ್ರ ಸ್ಥಾನದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಫೋಕಸ್ ಪದವಿಪೂರ್ವ ಕಾಲೇಜು ೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ । ತಾಲೂಕಿಗೆ ಪ್ರಥಮ ಸ್ಥಾನ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಕೇಂದ್ರ ಸ್ಥಾನದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಫೋಕಸ್ ಪದವಿಪೂರ್ವ ಕಾಲೇಜು ಉತ್ತಮ ಶಿಕ್ಷಣ ಕಲಿಕೆಗೆ ಮುಂದಾಗಿದ್ದು, ೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಹೊಂದಿದೆ.

ಪಟ್ಟಣದ ಹೊಸ ಬಸ್‌ನಿಲ್ದಾಣದ ಸಮೀಪ ಡಿ.ಕಾಳೇನಹಳ್ಳಿ ರಸ್ತೆಯಲ್ಲಿರುವ ಫೋಕಸ್ ಪದವಿಪೂರ್ವ ಕಾಲೇಜು ೨೦೨೦-೨೧ನೇ ಸಾಲಿನಲ್ಲಿ ಪ್ರಾರಂಭವಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಸದ್ವಿದ್ಯಾ ಎಜುಕೇಷನ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ಫೋಕಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಎಚ್.ಜಿ.ನಮ್ರತಾ ೬೦೦ ಅಂಕಗಳಿಗೆ ೫೮೭ ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಕನ್ನಡ-೯೭, ಇಂಗ್ಲೀಷ್-೯೫, ಫಿಸಿಕ್ಸ್-೯೬, ಕೆಮಿಸ್ಟ್ರಿ-೯೯, ಮ್ಯಾಥ್ಸ್‌-೧೦೦, ಬಯಾಲಜಿ-೧೦೦ ಅಂಕ ಪಡೆದು, ರಾಜ್ಯಕ್ಕೆ ೧೧ನೇ ಸ್ಥಾನ, ಜಿಲ್ಲೆಗೆ ೫ನೇ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಗುರುವಾರ ಕಾಲೇಜಿನಿಂದ ಅಭಿನಂದಿಸಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಮೋಹನ್‌, ನಿರಂತರ ಶ್ರಮದೊಂದಿಗೆ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಕಾಲೇಜಿನಿಂದ ಅಭಿನಂದಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಅವರ ಈ ಉತ್ತಮ ಸಾಧನೆಗೆ ಕಾಲೇಜಿನ ಸಿಬ್ಬಂದಿ, ಭೋಧಕರು, ಮತ್ತು ಪೋಷಕರು ಕಾರಣರಾಗಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದರು.

ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಕಾಲೇಜು ಫಲಿತಾಂಶದಲ್ಲಿ ಏರುಗತಿ ಸಾಧಿಸುತ್ತ ಸಾಗಿದೆ. ಮೊದಲ ವರ್ಷ-ಶೇ.೮೭, ಎರಡನೇ ವರ್ಷ-ಶೇ.೯೪ ಮತ್ತು ಪ್ರಸಕ್ತ ವರ್ಷ-ಶೇ.೧೦೦ ರಷ್ಟು ಫಲಿತಾಂಶ ದಾಖಲಿಸಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಿಂದ ೬೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೩೯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಮ್ರತ, ಸಾನಿಕಾ, ಅಭಿಷೇಕ್, ಜಗದೀಶ್ ಸೇರಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಉತ್ತಮ ಸಾಧನೆ ಮಾಡಿದ ಮಕ್ಕಳು, ತಮ್ಮ ಕಲಿಕೆಯ ವಿಧಾನ, ಉತ್ತಮ ಅಂಕಗಳಿಕೆಗೆ ಅನುಸರಿಸಿದ ಮಾನದಂಡಗಳು, ಉಪನ್ಯಾಸಕರ ಸಹಕಾರ, ಶ್ರಮ ತಮ್ಮ ಸಾಧನೆಗೆ ಪೂರಕವಾದ ಕುರಿತು ಮಾತನಾಡಿದರು.

ಟ್ರಸ್ಟ್‌ನ ಅಧ್ಯಕ್ಷ ಮೋಹನ್, ಪ್ರಾಂಶುಪಾಲ ಗೋಪಾಲಕೃಷ್ಣ, ಉಪನ್ಯಾಸಕರಾದ ಬರ್ನಾಡ್, ರೋಹನ್‌ಗೌಡ, ಪೋಷಕರಾದ ಗಂಗಾಧರ್, ಕಾಂತರಾಜ್ ಇದ್ದರು.

ಚನ್ನರಾಯಟ್ಟಣದಲ್ಲಿ ಫೋಕಸ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯಿಂದ ಗುರುವಾರ ಅಭಿನಂದಿಸಲಾಯಿತು.

Share this article