ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಕೆಎಂ ದೊಡ್ಡಿ, ಎಂಟಿ ದೊಡ್ಡಿ ಗ್ರಾಮಗಳಲ್ಲಿ ಸ್ಥಗಿತವಾಗಿದ್ದ ಮೇವು ಘಟಕ ಮತ್ತೇ ಪುನರಾರಂಭವಾಗಿದ್ದು ಜಾನುವಾರುಗಳಿಗೆ ಮೇವು ಸಿಗುತ್ತಿದ್ದು, ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.ತಾಲೂಕಿನ ಕೆವಿಎನ್ ದೊಡ್ಡಿ, ಎಂಟಿದೊಡ್ಡಿ ಗ್ರಾಮದ ಗೋಶಾಲೆಗಳಲ್ಲಿ ಏ. 25 ರಿಂದ ಮೇ 5ರವರೆಗೆ ಚುನಾವಣೆ ಹಿನ್ನೆಲೆ ಗೋ ಶಾಲೆಗಳ ಜಾನುವಾರುಗಳಿಗೆ ಮೇವು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಜಾನುವಾರಗಳು ಕಳೆದ ಒಂದು ವಾರದಿಂದ ಪರದಾಡುವ ಸ್ಥಿತಿ ಉಂಟಾಗಿತ್ತು. ರೈತರು ಭಾನುವಾರ ಗೋಶಾಲೆಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಮೇವು ಸರಬರಾಜು ಮಾಡುವಂತೆ ಒತ್ತಾಯಿಸಿದ್ದರು. ತಕ್ಷಣ ಅಧಿಕಾರಿಗಳು ಗೋಶಾಲೆಗಳಿಗೆ ಮೇವು ಸರಬರಾಜು ಮಾಡುವ ಮೂಲಕ ಕ್ರಮ ಕೈಗೊಂಡಿದ್ದಾರೆ.
1,250ಕ್ಕೂ ಹೆಚ್ಚು ಜಾನುವಾರುಗಳು ಎರಡು ಗೋಶಾಲೆಗಳ ವ್ಯಾಪ್ತಿಯಲ್ಲಿರುವುದರಿಂದ ಸಂಬಂಧಪಟ್ಟ ಇಲಾಖೆ ದಿನಂಪ್ರತಿ ಗೋಶಾಲೆಗಳಿಗೆ ನೀಡುವ ಮೇವನ್ನು ತಪ್ಪದೇ ಸರಬರಾಜು ಮಾಡಿ ಎಂದು ರೈತರು ಮನವಿ ಮಾಡಿದ್ದಾರೆ.ಜಾನುವಾರುಗಳಿಗಾಗಿ ಮೇವು ನಿಧಿ ಸ್ಥಾಪನೆ:ಹನೂರು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಮೇವು ಡಿಪೋ (ನಿಧಿ) ತೆರೆಯಲಾಗಿದೆ. ಮಳೆ ಯಿಲ್ಲದೆ ಜಾನುವಾರುಗಳು ತೀವ್ರವಾದ ಬರಗಾಲದಿಂದ ತತ್ತರಿಸುತ್ತಿರುವುದರಿಂದ ಸರ್ಕಾರ ಜಿಲ್ಲಾಡಳಿತದ ವತಿಯಿಂದ ತಾಲೂಕಿನಲ್ಲಿ 16 ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆದು ಜಾನುವಾರುಗಳ ಗಣತಿಯಂತೆ ಪ್ರತಿ ಜಾನು ವಾರುಗೆ ದಿನಕ್ಕೆ 6 ಕೆಜಿಯಂತೆ ಒಂದು ವಾರಕ್ಕೆ ಆಗುವಷ್ಟು ಮೇವು ವಿತರಿಸಲಾಗುತ್ತಿದೆ ಇಲ್ಲಿಯವರೆಗೆ 800 ಟನ್ನು ಮೇವು ಜಾನುವಾರಗಳಿಗೆ ವಿತರಿಸಲಾಗಿದೆ.
ಮೇವು ನಿಧಿ ಘಟಕ ಸ್ಥಾಪನೆ:ಪಟ್ಟಣದ ಆರ್‌ಎಂಸಿ ಆವರಣದಲ್ಲಿ ನೂತನವಾಗಿ ತೆರೆಯಲಾಗಿರುವ ಮೇವು ನಿಧಿ ಘಟಕದಲ್ಲಿ ಆಸಕ್ತ ರೈತರು ಮೇವು ಪಡೆಯಲು ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ತರುವುದು ಕಡ್ಡಾಯವಾಗಿರುತ್ತದೆ.
ಮೇವು ನಿಧಿ ಘಟಕದಲ್ಲಿ ಸಬ್ಸಿಡಿ ದರದಲ್ಲಿ ದಿನಕ್ಕೆ 50 ರೈತರಿಗೆ ಒಂದು ಜಾನುವರಿಗೆ ಆರು ದಿನಕ್ಕೆ ಆಗುವಷ್ಟು ಪ್ರತಿ ಕೆಜಿಗೆ 2 ರು. ನಂತೆ ಸಬ್ಸಿಡಿ ದರದಲ್ಲಿ ಮೇವು ವಿತರಿಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 5.30 ವರೆಗೆ ಮೇವು ಪಡೆಯಲು ರೈತರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿ ಸಿದ್ದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.