ಮೇವು ಕೊರತೆ: ರೈತರಲ್ಲಿ ಆತಂಕ

KannadaprabhaNewsNetwork |  
Published : Oct 04, 2026, 02:30 AM IST
(1ಎನ್.ಆರ್.ಡಿ4 ಜಾನುವಾರುಗಳಿಗೆ ಸಂಗ್ರಹಿಸಿದ ಬಣವಿಗಳು ಅಲ್ಪಸ್ವಲ್ಪ ಉಳಿದಿರುವುದು.) | Kannada Prabha

ಸಾರಾಂಶ

ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಾನುವಾರುಗಳಿಗೆ ಹೊಟ್ಟು, ಮೇವು ಕೊರತೆಯಾಗುವ ಭಯ ರೈತರನ್ನು ಕಾಡುತ್ತಿದೆ.

ಕಡಿಮೆ ಬೆಲೆಗೆ ಜಾನುವಾರು ಮಾರುತ್ತಿರುವ ರೈತರು । ಗೋ ಶಾಲೆ, ಮೇವು ಬ್ಯಾಂಕ್ ಪ್ರಾರಂಭಿಸಲು ಒತ್ತಾಯ

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಾನುವಾರುಗಳಿಗೆ ಹೊಟ್ಟು, ಮೇವು ಕೊರತೆಯಾಗುವ ಭಯ ರೈತರನ್ನು ಕಾಡುತ್ತಿದೆ.

ಮುಂಗಾರು ಹಂಗಾಮಿನ ಪ್ರಾರಂಭದಲ್ಲಿ ತಾಲೂಕಿನಲ್ಲಿ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ಆದರೆ ಸಕಾಲಕ್ಕೆ ಮಳೆ ಆಗದ್ದರಿಂದ ಎಲ್ಲಾ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಒಣಗಿವೆ. ಹಾಗಾಗಿ ಈ ವರ್ಷ ಜಾನುವಾರುಗಳಿಗೆ ಮೇವು ಸಂಗ್ರಹ ಕಷ್ಟದ ಕೆಲಸವಾಗಿದೆ.

ಸದ್ಯ ರೈತರು ಕಳೆದ ವರ್ಷ ಸಂಗ್ರಹ ಮಾಡಿರುವ ಹೊಟ್ಟು, ಮೇವಿನ ಬಣವೆಗಳು ಮುಗಿಯುಲು ಬಂದಿದ್ದರಿಂದ ಜಾನುವಾರುಗಳನ್ನು ಹೇಗೆ ಸಾಕಬೇಕೆಂದು ರೈತರಿಗೆ ತಿಳಿಯದಂತಾಗಿದೆ. ಇದರಿಂದ ಕೆಲವು ರೈತರು ತಮ್ಮ ಜಾನುವಾರುಗಳನ್ನು ಕಡಿಮೆ ಬೆಲೆಗೆ ಕಟುಕರಿಗೆ ಮಾರಾಟ ಮಾಡುತ್ತಿದ್ದಾರೆ.

ಪ್ರಾರಂಭವಾಗಿದ ಗೋ ಶಾಲೆಗಳು:

ಪ್ರಸುಕ್ತ ವರ್ಷ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಸರ್ಕಾರ ಈಗಾಗಲೇ ಈ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಣೆ ಮಾಡಿದೆ. ಆದರೆ ಜಾನುವಾರುಗಳಿಗೆ ಗೋ ಶಾಲೆ ಪ್ರಾರಂಭ ಮಾಡಿಲ್ಲ.

2024-25ನೇ ಸಾಲಿನ ಜಾನುವಾರುಗಳ ಗಣತಿ ಪ್ರಕಾರ ಎತ್ತು, ಆಕಳು, ಎಮ್ಮೆ ಸೇರಿ ಒಟ್ಟು 17807 ಹಾಗೂ ಕುರಿ, ಮೇಕೆ ಸೇರಿ ಒಟ್ಟು 44019 ಜಾನುವಾರು ತಾಲೂಕಿನಲ್ಲಿವೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಸದ್ಯ ತಾಲೂಕಿನ ರೈತರ ಹತ್ತಿರ 31 ವಾರಕ್ಕೆ ಆಗುವಷ್ಟು ಮೇವು ಸಂಗ್ರಹವಿದೆ. ಮೇಲಾಗಿ 587 ಬೋರ್‌ವೆಲ್ ಹೊಂದಿರುವ ರೈತರಿಗೆ ಶೀಘ್ರದಲ್ಲಿ ಮೇವಿನ ಬೀಜ ವಿತರಣೆ ಮಾಡಲಾಗುವುದು. ನರಗುಂದ ಮತ್ತು ಕೊಣ್ಣೂರಲ್ಲಿ ಮೇವು ಬ್ಯಾಂಕ್ ಪ್ರಾರಂಭ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಪಶು ಇಲಾಖೆಯ ವೈದ್ಯ ಡಾ. ಸಂತೋಷ ಕರೆಭರಮಣ್ಣವರ ತಿಳಿಸಿದ್ದಾರೆ.ತಾಲೂಕಿನಲ್ಲಿ ಮಳೆಯಿಲ್ಲದೆ ಮೇವಿನ ಕೊರತೆಯಿಂದ ರೈತರು ಕಡಿಮೆ ಬೆಲೆಗೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಬೇಗ ಗೋ ಶಾಲೆ ಮತ್ತು ಮೇವು ಬ್ಯಾಂಕ್ ಪ್ರಾರಂಭಿಸಬೇಕು ಎಂದು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಡ್ಡಿ ರಾಯರೆಡ್ಡಿ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
ಯಕ್ಷಗಾನ ಜಿಲ್ಲೆಯ ಹೆಮ್ಮೆಯ ಕಲೆ: ಶಾರದಾ ಶೆಟ್ಟಿ