ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಾನಪದ ಲೋಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿರುವ ಎರಡು ದಿನಗಳ ವಿದ್ಯಾರ್ಥಿ ಜಾನಪದ ಲೋಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಹಳ್ಳಿಗಳ ಸೊಗಡು, ಶ್ರಮಜೀವಿಗಳ ನೋವು- ನಲಿವು ಈ ಕಲೆಗಳಲ್ಲಿ ಹಾಸುಹೊಕ್ಕಾಗಿವೆ. ಸಾಂಸ್ಕೃತಿಕ ಬೇರುಗಳ ರಕ್ಷಣೆಗೆ ಜಾನಪದ ಕಲೆಗಳು ಗಟ್ಟಿ ಅಡಿಪಾಯಗಳು. ನಮ್ಮ ಪೂರ್ವಜರ ಆಚಾರ- ವಿಚಾರಗಳು, ನಂಬಿಕೆಗಳು ಮತ್ತು ಜೀವನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಜಾನಪದ ಕಲೆಗಳು ಮಾಡುತ್ತವೆ ಎಂದರು.ಸಾಮಾಜಿಕ ಐಕ್ಯತೆಯಲ್ಲೂ, ಶ್ರಮಿಕ ಜನಸಮುದಾಯಗಳನ್ನು ಜಾತಿ- ಮತದ ಭೇದವಿಲ್ಲದೆ ಒಂದು ಗೂಡಿಸುತ್ತವೆ. ಊರಿನ ಹಬ್ಬಗಳು, ಜಾತ್ರೆಗಳಲ್ಲಿ ನಡೆಯುವ ಕಲಾ ಪ್ರಕಾರಗಳು ಸಾಮೂಹಿಕ ಶಕ್ತಿಯನ್ನು ಮತ್ತು ಸೌಹಾರ್ದತೆಯನ್ನು ಎತ್ತಿ ಹಿಡಿಯುತ್ತವೆ. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ದಣಿವು ನೀಗಿಸಿಕೊಳ್ಳಲು ರೈತರು ಹಾಡುವ ಬೀಸುವ ಪದಗಳು, ನೆಟ್ಟಿಯ ಹಾಡುಗಳು ಕೇವಲ ಗೀತೆಗಳಲ್ಲ. ಅವು ಶ್ರಮಜೀವಿಗಳ ಉಸಿರು. ಇವು ಮನುಷ್ಯನ ಮನಸ್ಸಿಗೆ ಮುದ ನೀಡಿ ಬದುಕುವ ಉತ್ಸಾಹ ತುಂಬುತ್ತವೆ ಎಂದು ತಿಳಿಸಿದರು.
ಈಗ ಹೈಟೆಕ್ ಕಾನ್ವೆಂಟ್ ಗಳೂ ಶಾಲಾ ವಾರ್ಷಿಕೋತ್ಸವದ ದಿನಗಳಲ್ಲಿ ಪಾಶ್ಚಿಮಾತ್ಯ ಹಾಡು- ಕುಣಿತದ ಜೊತೆಗೆ ಈ ಮಣ್ಣಿನ ಜಾನಪದ ಹಾಡು- ನೃತ್ಯಗಳು ಸೇರಿದಂತೆ ಇತರೆ ಕಲಾ ಪ್ರಕಾರಗಳ ಪ್ರದರ್ಶನದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸುತ್ತಿವೆ. ಇದು ಜಾನಪದ ಕಲೆಗಳ ಶಕ್ತಿ ಮತ್ತು ಸತ್ವ. ಆಧುನಿಕ ತಂತ್ರಜ್ಞಾನದ ಮೂಲಕ ಪಾಶ್ಚಿಮಾತ್ಯ ಮಾತ್ರವಲ್ಲದೆ ಇತರೆ ಸಾಂಸ್ಕೃತಿಕ ದಾಳಿಗಳು ನಡೆದರೂ ನಮ್ಮ ಜಾನಪದ ಕಲೆಗಳನ್ನು ಅಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಜಾನಪದ ಎನ್ನುವುದು ಹರಿಯುವ ನದಿಯಂತೆ. ಅದು ಕಾಲಕ್ಕೆ ತಕ್ಕಂತೆ ಬದಲಾದರೂ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವುದಿಲ್ಲ. ಈ ದೇಶಿ ಸೊಗಡನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಜ್ಞಾವಂತ ಜವಾಬ್ದಾರಿ ಆಗಿದೆ. ಅದನ್ನು ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ, ಪ್ರತೀ ಕಲಾ ತಂಡಗಳೂ ಹೆಮ್ಮೆಯಿಂದ ನಿಭಾಯಿಸುತ್ತಾರೆ ಎನ್ನುವ ಭರವಸೆ ಇದೆ ಎಂದು ಕೆ.ವಿ.ಪ್ರಭಾಕರ್ ಹೇಳಿದರು.
ಜಾನಪದ ಕಲೆಯಿಂದ ಜ್ಞಾನ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ಸ್ವ ಉದ್ಯೋಗಿಗಳಾಗಲು ಸಾಧ್ಯವಿದೆ. ವಿದ್ಯಾರ್ಥಿಗಳು ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಉಳಿಸಿ ಬೆಳೆಸಲು ಅಣಿಯಾಗಿರುವುದು ಖುಷಿ ತಂದಿದೆ. ಈಗ ಎಚ್.ಎನ್.ನಾಗೇಗೌಡರ ಕನಸು ಸಾರ್ಥಕವಾಗಿದೆ ಎಂದು ತಿಳಿಸಿದರು.