ಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳಲ್ಲಿ ಸಾಮಾಜಿಕ ಚಿಂತನೆ ಹಾಗೂ ಮಾನವೀಯತೆ ಬೆಳೆಸಿ ಎಂದು ರಂಗಕರ್ಮಿ ಮೈಮ್‌ರಮೇಶ್‌ಕರೆ ನೀಡಿದರು.ರಂಗಾಂತರಂಗ ತಂಡವು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಏರ್ಪಡಿಸಿರುವ ಎರಡು ದಿನಗಳ ಮಕ್ಕಳ ನಾಟಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಇದರ ಜೊತೆಗೆ ಸಂಸ್ಕೃತಿ, ಸಂಸ್ಕಾರವನ್ನು ಕೂಡ ಕಲಿಸಿ ಎಂದು ಪೋಷಕರಿಗೆ ಸಲಹೆ ಮಾಡಿದರು.ಪ್ರಸ್ತುತ ಸಮಾಜ ಹಾಳಾಗುತ್ತಿದೆ. ಪೋಷಕರು, ಮಕ್ಕಳು ರಿಯಾಲಿಟಿ ಶೋ, ಧಾರಾವಾಹಿಗಳನ್ನು ನೋಡಿಕೊಂಡು ಕೂರುತ್ತಾರೆ. ಇದರಿಂದ ಮಕ್ಕಳ ಮನೋವಿಕಾಸ ಆಗುತ್ತಿಲ್ಲ ಪೋಷಕರು ಹಾಗೂ ಶಿಕ್ಷಕರು. ಮಕ್ಕಳನ್ನು ತಿದ್ದಬೇಕು. ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಮಹಾತ್ಮಗಾಂಧಿ ಮೊದಲಾದ ಮಹನೀಯರ ಬಗ್ಗೆ ತಿಳಿಸಿಕೊಡಬೇಕು ಎಂದು ಅವರು ಹೇಳಿದರು.ಮಕ್ಕಳ ನಾಟಕಗಳನ್ನು ಪೋಷಕರು ಕೂಡ ನೋಡಿ, ಸಂವಾದಿಸಬೇಕು ಎಂದ ಅವರು, ರಂಗಭೂಮಿಯಲ್ಲಿ ಮಾತ್ರ ವಾಕ್ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಮೊದಲು ಬೀದಿ ನಾಟಕಗಳ ಮೂಲಕವೇ ಸಮಾಜದ ಓರೆಕೋರೆಗಳನ್ನು ಹೇಳಲಾಗುತ್ತಿತ್ತು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ,.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಶಿಕ್ಷಣವು ಮಕ್ಕಳ ಬಾಲ್ಯವನ್ನು ಕಸಿಯಬಾರದು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಈ ರೀತಿಯ ನಾಟಕೋತ್ಸವಗಳು ನೆರವಾಗುತ್ತವೆ ಎಂದರು.ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಅನಿತಾ ಮಾತನಾಡಿ, ಮಕ್ಕಳನ್ನು ಎರಡು- ಮೂರು ಗಂಟೆಗಳಾದರೂ ಸಾಮಾಜಿಕ ಜಾಲತಾಣ, ಟಿವಿ, ಮೊಬೈಲ್‌ಗಳಿಂದ ಹೊರಗೆ ತರಬೇಕು ಎಂಬ ಉದ್ದೇಶದಿಂದ ರಂಗಾಂತರಂಗ ತಂಡದೊಂದಿಗೆ ಒಡಂಬಡಿಕೆ ಮಾಡಿಕೊಂಡು, ಉತ್ತೇಜನ ನೀಡಲಾಗುತ್ತಿದೆ ಎಂದರು.ಲೇಖಕ ಬಾರುಕೋಲು ಬಿ.ಆರ್. ರಂಗಸ್ವಾಮಿ ಮಾತನಾಡಿ, ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡಬೇಕು. ಅವರಲ್ಲಿ ವಿಶ್ವಪ್ರಜ್ಞೆ ಬೆಳೆಸಬೇಕು ಎಂದರು.ಲೇಖಕ ನಾ. ದಿವಾಕರ ಪ್ರಾಸ್ತಾವಿಕ ಭಾಷಣ ಮಾಡಿ, ರಂಗಭೂಮಿಯಲ್ಲಿ ದುಡಿಯುವುದು ಕಷ್ಟ. ಇದು ಸಿನಿಮಾ ರೀತಿ ಅಲ್ಲ. ಕೀರ್ತಿರಾಜ್ ಅವರು ಗ್ರಾಮಾಂತರ ಪ್ರದೇಶಗಳ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗಾಗಿಯೇ ನಾಟಕಗಳನ್ನು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾಟಕಕಾರ ಮೂರ್ತಿ ದೇರಾಜೆ ಮಾತನಾಡಿದರು. ರಂಗಾಂತರಂಗ ತಂಡದ ಅಧ್ಯಕ್ಷ ಕೆಎಂ. ಕೀರ್ತಿರಾಜ್ ಇದ್ದರು. ವೆಂಕಟೇಶ್ ಈಡಿಗರ್‌ಕಾರ್ಯಕ್ರಮ ನಿರೂಪಿಸಿದರು. ಭವ್ಯಾ ಅವರನ್ನು ಸನ್ಮಾನಿಸಲಾಯಿತು.ನಂತರ ವಾರಾಂತ್ಯ ತರಬೇತಿಯ ಮಕ್ಕಳು ಮೂರ್ತಿ ದೇರಾಜೆ ರಚನೆಯ, ಎಸ್. ಶ್ರೀಕಾಂತ್ ನಿರ್ದೇಶನದ ಹುಲಿ ಬೇಟೆಯ ಹಿಂದೆ..ಮುಂದೆ ನಾಟಕ ಪ್ರದರ್ಶಿಸಿದರು.