ರೋಣ: ನಮ್ಮ ಗ್ರಾಮೀಣ ಜನಪದ ಕಲೆಗಳು ಕೇವಲ ರಂಜನೆಗಷ್ಟೇ ಸೀಮಿತವಾಗಿಲ್ಲ. ಅವು ನಮ್ಮ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಇತಿಹಾಸವನ್ನು ಜೀವಂತವಾಗಿಟ್ಟಿರುವ ಜೀವಾಳ. ಜನಪದ ಕಲೆಗೆ ತನ್ನದೆಯಾದ ಇತಿಹಾಸವಿದ್ದು, ಇಂದಿನ ಆಧುನಿಕ ಕಾಲದಲ್ಲೂ ಜನಪದ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜನಪದ ಆಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಹೇಳಿದರು.ಮಂಗಳವಾರ ರಾತ್ರಿ ತಾಲೂಕಿನ ಅರಣಹುಸಿ ಗ್ರಾಮದ ಸಮಾಜ ಮಂದಿರದಲ್ಲಿ ಶ್ರೀ ದೇವಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ವತಿಯಿಂದ ಶ್ರೀ ಭಗತ್ ಸಿಂಗ್ ಸಂಘ ಹಾಗೂ ಶ್ರೀ ಗುದ್ನೇಶ್ವರ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಜರುಗಿದ ಕಲಾ ನಡಿಗೆ ನಿಮ್ಮ ಬಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಹಿರಿಯ ಮುಖಂಡ ಕೆ.ಪಿ.ಪಾಟೀಲ ವಹಿಸಿದ್ದರು.
ಸಾನ್ನಿಧ್ಯವನ್ನು ವೇದಮೂರ್ತಿ ನನ್ನಯ್ಯಸ್ವಾಮಿ ಹಿರೇಮಠ ವಹಿಸಿ, ಗ್ರಾಮೀಣ ಭಾಗದ ಜನರಿಗೆ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಸೌರಭವನ್ನು ಉಣಬಡಿಸುವ ನಿಟ್ಟಿನಲ್ಲಿ ಜನಪದ ವಿವಿಧ ಪ್ರಕಾರಗಳನ್ನು ಉಳಿಸಿ ಬೆಳಸುವಲ್ಲಿ ಕನ್ನಡ ಮತ್ತ ಸಂಸ್ಕೃತಿ ಇಲಾಖೆ ಕಾರ್ಯ ಶ್ಲಾಘನೀವಾಗಿದೆ ಎಂದರು.ಅರುಣೋದಯ ಕಲಾ ತಂಡ ಕೊತಬಾಳ ಹಾಗೂ ಗೊಡಚಯ್ಯ ಪುರಾಣಿಕಮಠ ಮತ್ತು ಸಂಗಡಿಗರ ಕಲಾ ತಂಡದಿಂದ ಸಮೂಹ ನೃತ್ಯ, ಜನಪದ ನೃತ್ಯ ಸಾಂಸ್ಕೃತಿಕ , ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಮೂಡಿಬಂದು ಪ್ರೇಕ್ಷಕರ ಮನಸೆಳೆದವು. ಹರಪನಳ್ಳಿಯ ಕಲ್ಲಹಳ್ಳಿ ಮೌನೇಶ ಬಡಿಗೇರ ಅವರಿಂದ ಮಹಿಳಾ ನೃತ್ಯ ಪ್ರದರ್ಶನ ಮನಮೋಹಕವಾಗಿ ಜರುಗಿತು.