ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವಾಳ

KannadaprabhaNewsNetwork |  
Published : Jul 13, 2026, 12:30 AM IST
12ಎಚ್ಎಸ್ಎನ್11 :  | Kannada Prabha

ಸಾರಾಂಶ

ಜಾನಪದ ಕಲೆಗಳು ಕೇವಲ ಮನರಂಜನೆಯ ಮಾಧ್ಯಮಗಳಲ್ಲ, ಅವು ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಮೂಲ್ಯ ಪರಂಪರೆಯಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಜಾನಪದ ಕಲೆಯ ಮಹತ್ವವನ್ನು ಅರಿತು ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಸಂತ ಫಿಲೋಮಿನ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಅಡಿಯಾ ಲೋಬೋ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಾನಪದ ಕಲೆಗಳು ಕೇವಲ ಮನರಂಜನೆಯ ಮಾಧ್ಯಮಗಳಲ್ಲ, ಅವು ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಮೂಲ್ಯ ಪರಂಪರೆಯಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಜಾನಪದ ಕಲೆಯ ಮಹತ್ವವನ್ನು ಅರಿತು ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಸಂತ ಫಿಲೋಮಿನ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಅಡಿಯಾ ಲೋಬೋ ತಿಳಿಸಿದರು.

ನಗರದ ಸಂತ ಫಿಲೋಮಿನ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಲ್ಪಿತ ಜನಜಾಗೃತಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಫಿಲೋಮಿನ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಜಾನಪದ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಆಧುನಿಕ ಜೀವನಶೈಲಿ ಮತ್ತು ತಂತ್ರಜ್ಞಾನ ಬೆಳವಣಿಗೆಯ ನಡುವೆಯೂ ಜಾನಪದ ಕಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುತ್ತವೆ. ಜಾನಪದ ಕಲೆಗಳ ಮೂಲಕ ಸಮಾಜದ ಬದುಕು, ಆಚರಣೆ, ಸಂಪ್ರದಾಯ, ಶ್ರಮ ಹಾಗೂ ಜೀವನ ಮೌಲ್ಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಶಾಲಾ-ಕಾಲೇಜುಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಬೆಳೆಯುವುದರ ಜೊತೆಗೆ ತಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡುತ್ತದೆ. ಜಾನಪದ ಕಲೆಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ತಮ್ಮ ಮನಮೋಹಕ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಡೂರಿನ ಹೆಚ್.ಎಂ. ರವಿ ಮತ್ತು ತಂಡ ವೀರಗಾಸೆ ನೃತ್ಯ ಪ್ರದರ್ಶಿಸಿ ವೀರಶೈವ ಪರಂಪರೆಯ ವೈಭವವನ್ನು ಅನಾವರಣಗೊಳಿಸಿದರು. ಹಾಸನದ ತಟ್ಟೆಕೆರೆಯ ಲಕ್ಷ್ಮಣ್ ಮತ್ತು ತಂಡ ಡೊಳ್ಳು ಕುಣಿತದ ಮೂಲಕ ಸಭಾಂಗಣದಲ್ಲಿ ರೋಮಾಂಚನ ಮೂಡಿಸಿದರು. ಅಜ್ಜಂಪುರದ ಶ್ರೀನಿವಾಸ್ ಮತ್ತು ತಂಡ ಕೋಲಾಟ ಪ್ರದರ್ಶಿಸಿ ಕನ್ನಡ ಜಾನಪದ ಸಂಸ್ಕೃತಿಯ ಸೊಬಗನ್ನು ಅನಾವರಣಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೋಮಲ್ ಕುಮಾರ್ ಮತ್ತು ತಂಡ ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರೆ, ಜನಕ ನಾಯಕ ಮತ್ತು ತಂಡ ತತ್ವಪದಗಳ ಗಾಯನದ ಮೂಲಕ ಪ್ರೇಕ್ಷಕರ ಮನಸೆಳೆಯಿತು. ಎನ್. ಎನ್. ಲೋಕೇಶ್ ಮತ್ತು ತಂಡ ಜಾನಪದ ಗೀತೆಗಳನ್ನು ಗಾಯನ ಮಾಡಿ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಮೂಡಿಸಿದರು. ವಿವಿಧ ಕಲಾಪ್ರಕಾರಗಳ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದ ಗಣ್ಯರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕಲ್ಪಿತ ಜನಜಾಗೃತಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಎಚ್.ಕೆ. ಶೃತಿ, ಕನ್ನಡ ಉಪನ್ಯಾಸಕ ಡಾ. ಐಚನಹಳ್ಳಿ ಕೃಷ್ಣಪ್ಪ, ಹಿರಿಯ ಕಲಾವಿದ ಭಗವಾನ್ ಸಿಂಗ್, ಕಲಾವಿದ ಕೋಮಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕುಮಾರ್‌ ಕಟ್ಟೆಬೆಳಗುಲಿ ಕಾರ್ಯಕ್ರಮವನ್ನು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಬೇಕು: ಹರೀಶ್
2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ: ಸೀಕಲ್ ರಾಮಚಂದ್ರಗೌಡ