ಬರದ ನಾಡು ಜಗಳೂರು ತಾಲೂಕಿನ ಶೇ.೬೦ ಕ್ಕಿಂತಲೂ ಹೆಚ್ಚು ಕೆರೆಗಳು ಬತ್ತಿ ಬರಡಾಗಿದ್ದ ಸಂದರ್ಭದಲ್ಲಿ, ಪ್ರಸ್ತುತ ಮಳೆಗಾಲದ ಕೊರತೆಯ ಆತಂಕದ ಮಧ್ಯೆಯೂ ತಾಲೂಕಿನ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಾಲೂಕಿನ ೫೭ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯಡಿ ಸದ್ಯ ೨೪ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿದುಬರುತ್ತಿದೆ. ಸದಾ ಬರಗಾಲದ ಕರಾಳ ಅನುಭವ ಉಂಡಿದ್ದ ಈ ಭಾಗದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಈ ಸಿಹಿಸುದ್ದಿಯಿಂದ ಹಿರಿಹಿರಿ ಹಿಗ್ಗುವಂತಾಗಿದೆ.
- ಮಳೆ ಕೊರತೆ ಮಧ್ಯೆಯೂ ನಿಟ್ಟುಸಿರು ಬಿಟ್ಟ ರೈತರು । ಕೃಷಿ, ಜನ-ಜಾನುವಾರುಗಳಿಗೆ ನೀರು
- - -
- ಹೆಮ್ಮನಬೇತೂರು ಚಿದಾನಂದ
ಕನ್ನಡಪ್ರಭ ವಾರ್ತೆ ಜಗಳೂರು
ಬರದ ನಾಡು ಜಗಳೂರು ತಾಲೂಕಿನ ಶೇ.೬೦ ಕ್ಕಿಂತಲೂ ಹೆಚ್ಚು ಕೆರೆಗಳು ಬತ್ತಿ ಬರಡಾಗಿದ್ದ ಸಂದರ್ಭದಲ್ಲಿ, ಪ್ರಸ್ತುತ ಮಳೆಗಾಲದ ಕೊರತೆಯ ಆತಂಕದ ಮಧ್ಯೆಯೂ ತಾಲೂಕಿನ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಾಲೂಕಿನ ೫೭ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯಡಿ ಸದ್ಯ ೨೪ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿದುಬರುತ್ತಿದೆ. ಸದಾ ಬರಗಾಲದ ಕರಾಳ ಅನುಭವ ಉಂಡಿದ್ದ ಈ ಭಾಗದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಈ ಸಿಹಿಸುದ್ದಿಯಿಂದ ಹಿರಿಹಿರಿ ಹಿಗ್ಗುವಂತಾಗಿದೆ.
ಪ್ರಸ್ತುತ ವರ್ಷದ ''''ಎಲ್ ನಿನೋ'''' ಪರಿಣಾಮದಿಂದಾಗಿ ಜಗಳೂರು ತಾಲೂಕಿನಲ್ಲಿ ಇದುವರೆಗೆ ಸಂಪೂರ್ಣವಾಗಿ ಮಳೆ ಬಿದ್ದಿಲ್ಲ. ಬಿದ್ದ ತುಂತುರು ಮಳೆಗೆ ಕೇವಲ ಶೇ.೧೨ರಷ್ಟು ಮಾತ್ರ ಬಿತ್ತನೆಯಾಗಿದ್ದು, ಸುಡುವ ಬಿಸಿಲಿಗೆ ಬೆಳೆಗಳು ಒಣಗುತ್ತಿವೆ. ಇನ್ನು ಕೆಲವು ಕಡೆಗಳಲ್ಲಿ ರೈತರು ಬಿತ್ತನೆ ಮಾಡದೇ ಬರಡು ನೆಲ ಹಾಗೆಯೇ ಬಿಟ್ಟಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಏತ ನೀರಾವರಿ ಯೋಜನೆಯ ನೀರು ಸದ್ಯ ತಾಲೂಕಿನ ಇದೀಗ ೨೪ ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಅಂತರ್ಜಲಮಟ್ಟ ವೃದ್ಧಿಸಿ, ತೋಟಗಾರಿಕಾ ಬೆಳೆಗಳನ್ನು ನಂಬಿರುವ ರೈತರಲ್ಲಿ ನೆಮ್ಮದಿ ಮೂಡಿಸಿದೆ. ಕೆರೆಗಳ ಒಡಲು ತುಂಬಿಸುತ್ತಿರುವುದು ಜನ-ಜಾನುವಾರುಗಳಿಗೆ, ಜನತೆಗೆ ಕುಡಿಯುವ ನೀರು, ನೀರಾವರಿ ಮಾಡಿದ ತೋಟಗಾರಿಕೆ ಬೆಳೆಗಳಿಗೆ ಆಸರೆಯಾಗಿದೆ.
ಮೈದುಂಬಿ ಹರಿಯುತ್ತಿರುವ ತುಂಗಭದ್ರೆ:
ಮಲೆನಾಡಿನಲ್ಲಿ ಉತ್ತಮ ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ಕಳೆದ ಎರಡು ದಿನಗಳಿಂದ ೪೦ ಸಾವಿರ ಕ್ಯುಸೆಕ್ ನೀರು ಹರಿಯುತ್ತಿದ್ದು, ಹರಿಹರದ ಬಳಿ ನದಿಯು ಮೈದುಂಬಿ ಹರಿಯುತ್ತಿದೆ. ಇತ್ತ ದಿಟ್ಟೂರು ಪಂಪ್‌ಹೌಸ್‌ನಿಂದ ತಾಲೂಕಿನ ದೊಡ್ಡ ಕೆರೆಗಳಿಗೆ ಮಾತ್ರ ಸದ್ಯ ನೀರು ಹರಿಯುತ್ತಿದ್ದು, ಕಳೆದ ವರ್ಷ ಹರಿದ ನೀರಿನಿಂದ ಇನ್ನು ಕೆಲವು ಕೆರೆಗಳಲ್ಲಿ ಶೇ.೧೦ರಷ್ಟು ನೀರು ಇರುವುದರಿಂದ, ಈಗ ನೀರು ಹರಿದರೆ ಕೆರೆಗಳು ಶೀಘ್ರವೇ ಭರ್ತಿಯಾಗಲಿವೆ. ಹರಿಹರದ ಹೊಳೆಯಲ್ಲಿ ನೀರು ಹರಿಯುವ ಪ್ರಮಾಣ ಹೆಚ್ಚಾದಂತೆ ಜಗಳೂರಿನ ಇನ್ನುಳಿದ ಕೆರೆಗಳಿಗೂ ನೀರು ಹರಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕರ್ನಾಟಕ ನೀರಾವರಿ ನಿಗಮದ ಇಇ ಶ್ರೀಧರ್ ಹಾಗೂ ಎಇ ಆನಂದ್ ತಿಳಿಸಿದ್ದಾರೆ.
- - -
(ಕೋಟ್ಸ್)
* ಎಲ್ಲ ಕೆರೆಗಳೂ ಶೀಘ್ರದಲ್ಲೇ ಭರ್ತಿ
ಜಗಳೂರು ತಾಲೂಕಿನ ಕ್ಯಾಸೇನಹಳ್ಳಿ, ಗೌಡಗೊಂಡನಹಳ್ಳಿ, ಕೆಚ್ಚೇನಹಳ್ಳಿ, ಚಿಕ್ಕಮ್ಮನಹಟ್ಟಿ, ಹಾಗೂ ಕ್ಷೇತ್ರದ ಬೇವನಹಳ್ಳಿ ನಂದಿಕಂಬ, ಪುಣಬಗಟ್ಟಿ, ಕೆರೆಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದು, ಶೀಘ್ರದಲ್ಲೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಹರಿಸಲು ತೀರ್ಮಾನಿಸಲಾಗಿದೆ. ನದಿಯಲ್ಲಿ ನೀರಿನ ಲಭ್ಯತೆ ಆಧಾರದ ಮೇಲೆ ಒಟ್ಟು 8 ಮೋಟಾರ್‌ಗಳನ್ನು ಆನ್ ಮಾಡುವ ಮೂಲಕ ಒಟ್ಟು ೫೩ ಕೆರೆಗಳಿಗೆ ನೀರು ಹರಿಸಲಾಗುವುದು.
- ಆನಂದ್, ಎಇ.
- - -
* ಬಿಎಸ್‌ವೈ, ಸಿದ್ದು ಸರ್ಕಾರಗಳ ಫಲ ಸಿರಿಗೆರೆ ಶ್ರೀಗಳ ಸಾರಥ್ಯದಲ್ಲಿ ಅಂದಿನ ಮುಖ್ಯ ಮಂತ್ರಿ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 57 ಕೆರೆಗಳಿಗೆ ನೀರು ಹರಿಸುವುದು ಹಾಗೂ ನನ್ನ ಕನಸಿನ ಕೂಸು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿದೆ. ಆಯಾ ಕಾಲಘಟ್ಟಗಳಿಗೆ ಜೆ.ಡಿ.ಎಸ್. ಕಾಂಗ್ರೆಸ್ ನೇತೃತ್ವದ ಕುಮಾರಸ್ವಾಮಿ ಸಿದ್ದರಾಮಯ್ಯ ನೇತೃತ್ವದ ಸಹಕಾರವು ಸಹ ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ಬರಲು ಕಾರಣವಾಗಿದೆ.
- ಎಸ್.ವಿ.ರಾಮಚಂದ್ರ, ಮಾಜಿ ಶಾಸಕ, ಜಗಳೂರು ಕ್ಷೇತ್ರ.
- - -
-12 ಜೆ.ಜಿ.ಎಲ್.1:
ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಏತ ನೀರಾವರಿ ಯೋಜನೆಯಡಿ ರಭಸದಿಂದ ಹರಿದು ಬರುತ್ತಿರುವ ತುಂಗಭದ್ರಾ ನದಿಯ ನೀರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.