ಹಾನಗಲ್ಲ ತಾಲೂಕಿನ ರಂಗಗ್ರಾಮ ಖ್ಯಾತಿಯ ಶೇಷಗಿರಿಯಲ್ಲಿ ಧರ್ಮಸ್ಥಳ ನಿಡ್ಲೆಯ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಂಸ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು.
ಹಾನಗಲ್ಲ: ಜನಪದದ ಶ್ರೀಮಂತ ಕಲೆಯಾಗಿರುವ ಯಕ್ಷಗಾನ ಹಾಗೂ ದೊಡ್ಡಾಟ, ಸಣ್ಣಾಟಗಳು ನಮ್ಮ ಹಳ್ಳಿಗಳ ನೈತಿಕ ಸಾಮಾಜಿಕ ಹಿತದ ಮಾರ್ಗದರ್ಶನದ ಶಕ್ತಿಯಾಗಿದ್ದವು ಎಂದು ತಿಳವಳ್ಳಿಯ ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ. ಬಿರಾದಾರ ಹೇಳಿದರು.
ಹಾನಗಲ್ಲ ತಾಲೂಕಿನ ರಂಗಗ್ರಾಮ ಖ್ಯಾತಿಯ ಶೇಷಗಿರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶೇಷಗಿರಿಯ ಗಜಾನನ ಯುವಕ ಮಂಡಳ, ಹಾವೇರಿಯ ಸಾಹಿತಿ ಕಲಾವಿದರ ಬಳಗ ಸಂಯುಕ್ತವಾಗಿ ಆಯೋಜಿಸಿದ ಧರ್ಮಸ್ಥಳ ನಿಡ್ಲೆಯ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಂಸ ವಧೆ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ, ಸಂಸ್ಕೃತಿಯೊಂದಿಗೆ ನಾವಿದ್ದರೆ ನಮ್ಮ ಬದುಕಿನ ಹತ್ತು ಹಲವು ಲೋಪದೋಷಗಳನ್ನು ತಿದ್ದಿ ತೀಡಿಕೊಂಡು ಬದುಕಲು ಸಾಧ್ಯ. ಸಾಹಿತ್ಯ ಪುರಾಣಗಳಿಂದ ಅತ್ಯುತ್ತಮ ಬದುಕಿನ ಮಾರ್ಗದರ್ಶನ ಸಿಗುತ್ತದೆ. ಯಕ್ಷಗಾನ, ದೊಡ್ಡಾಟ, ಸಣ್ಣಾಟಗಳ ಕಡೆಗೆ ಈಗ ಆಕರ್ಷಣೆ ಕಡಿಮೆಯಾಗಿದ್ದರೂ ಜನಪದ ಕಲೆಗಳು ಮಾತ್ರ ನಿರಂತರವಾಗಿ ಸಮಾಜದಲ್ಲಿವೆ. ಮುಂದೊಂದು ದಿನ ಈ ಜನಪದ ಕಲೆಗೆ ದೊಡ್ಡ ಬೆಲೆ ಬರಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಿಳವಳ್ಳಿಯ ಶಾಂತೇಶ್ವರ ಪದವಿಪೂರ್ವ ಕಾಲೇಜು ಕಾರ್ಯದರ್ಶಿ ಗಣೇಶಪ್ಪ ಕೋಡಿಹಳ್ಳಿ, ಜನಪದಕ್ಕೆ ಇಡೀ ಸಮಾಜದ ಆರೋಗ್ಯ ಕಾಯುವ ಶಕ್ತಿ ಇದೆ. ಮನಸ್ಸು ಶಾರೀರಿಕ ಆರೋಗ್ಯದ ಮಹತ್ವದ ಚಿಂತನೆಗಳು, ಮಾರ್ಗದರ್ಶನಗಳು ಜನಪದದಲ್ಲಿವೆ. ಮತ್ತೆ ಜನಪದದತ್ತ ನಾವೆಲ್ಲ ನಡೆದರೆ ಸಾಮಾಜಿಕ ಸಾಮರಸ್ಯ ಗಟ್ಟಿಯಾಗಲು ಸಾಧ್ಯ ಎಂದರು.
ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಸಮಾಜ ಸೇವಕ ಬಸವರಾಜ ನರೇಂದ್ರ, ಶಂಕ್ರಣ್ಣ ಗುರಪ್ಪನವರ, ಯಕ್ಷಗಾನ ಕಲಾವಿದ ಶರಶ್ಚಂದ್ರ ಉಪಸ್ಥಿತರಿದ್ದರು. ನರಸಿಂಹ ಕೋಮಾರ, ಪ್ರಭು ಗುರಪ್ಪನವರ, ಉಮೇಶ ಆನವಟ್ಟಿ, ಶಿವಮೂರ್ತಿ ಹುಣಸಿಹಳ್ಳಿ, ಜಮೀರ ಪಠಾಣ, ನಾಗರಾಜ ಧಾರೇಶ್ವರ, ನಾಗರತ್ನಾ ಭಂಡಾರಿ, ಶಿವಯೋಗಿ ಎಂ.ಡಿ., ವೀರೇಂದ್ರ ನವಾತಿ, ಬಸವರಾಜ ಈರಣ್ಣನವರ, ಉಮೇಶ ಮಾಳಗಿ, ಜಮೀರ ಪಠಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.