ಕುಶಾಲನಗರ ಪುರಸಭೆ ವ್ಯಾಪ್ತಿಯ ಗೃಹ ಮತ್ತು ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಒದಗಿಸಲಾಗುತ್ತಿದ್ದು ಗೃಹ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಒಳಚರಂಡಿ ಜಾಲಕ್ಕೆ ಸಂಪರ್ಕ ಕಲ್ಪಿಸಿ ಕೊಳ್ಳುವಂತೆ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ತಿಳಿಸಿದ್ದಾರೆ.

ಕುಶಾಲನಗರ : ಕುಶಾಲನಗರ ಪುರಸಭೆ ವ್ಯಾಪ್ತಿಯ ಗೃಹ ಮತ್ತು ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಒದಗಿಸಲಾಗುತ್ತಿದ್ದು ಗೃಹ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಒಳಚರಂಡಿ ಜಾಲಕ್ಕೆ ಸಂಪರ್ಕ ಕಲ್ಪಿಸಿ ಕೊಳ್ಳುವಂತೆ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ತಿಳಿಸಿದ್ದಾರೆ.

ಅವರು ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಒಳಚರಂಡಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಶಾಲನಗರ ಒಳಚರಂಡಿ ಮಂಡಳಿ ಮೂಲಕ ಸಂಪರ್ಕ ಪಡೆಯಬೇಕಾಗಿದ್ದು ಈ ಸಂಬಂಧ ಕುಶಾಲನಗರ ಪುರಸಭೆಗೆ ನಿಗದಿತ ಸಂಪರ್ಕ ಶುಲ್ಕ ಪಾವತಿಸಿ ಆಕ್ಷೇಪಣಾ ರಹಿತ ದೃಢೀಕರಣ ಪತ್ರ ಪಡೆಯಬೇಕಾಗಿದೆ ಎಂದರು.

ಒಳಚರಂಡಿ ಯೋಜನೆಯ ವಾಣಿಜ್ಯ, ವಸತಿ ಸಂಪರ್ಕ ಶುಲ್ಕ ಒಂದು ಬಾರಿ ಪಾವತಿ ಮಾಡುವುದು. ಉಳಿದಂತೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಮುಂದಿನ ಹಣಕಾಸು ವರ್ಷದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಕಲ್ಯಾಣ ಮಂಟಪ ಹೋಟೆಲ್ ಮತ್ತು ವಸತಿಗೃಹಗಳು ಎರಡು ಗ್ರೇಡ್ ಗಳಲ್ಲಿ ಸಂಪರ್ಕ ಶುಲ್ಕ ನಿಗದಿಪಡಿಸಲಾಗಿದ್ದು ಇತರ ಎಲ್ಲ ಸಣ್ಣ ಉದ್ಯಮಿಗಳು ಮತ್ತು ಗೃಹ ಬಳಕೆಗೆ ಪ್ರತ್ಯೇಕ ಮೊತ್ತದ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಸಂಪರ್ಕಗಳಿಗೆ ಸಂಪರ್ಕ ಶುಲ್ಕವನ್ನು ಪುರಸಭೆ ವಿಶೇಷ ನಿಧಿಯಿಂದ ಭರಿಸಲಾಗುವುದು. ಕಟ್ಟಡ ಬಾಡಿಗೆ ನೀಡಿದ್ದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 6,500 ಸಂಪರ್ಕಗಳು ಇದ್ದು ಜನರು ಸ್ಪಂದನೆ ನೀಡದಿರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಕೆ ಎಸ್ ನಾಗೇಶ್ ಮತ್ತು ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮಂಡಿಸಿದರು.

ಪುರಸಭೆಯಿಂದ ಒಳಚರಂಡಿ ಮಂಡಳಿಗೆ ಕಾಮಗಾರಿ ಸಂಬಂಧ 1 ಕೋಟಿ 57 ಲಕ್ಷ ಹಣ ಪಾವತಿಸಬೇಕಾಗಿದೆ ಮತ್ತು ವಾರ್ಷಿಕ 2 ಕೋಟಿ ರೂಗಳ ನಿರ್ವಹಣಾ ವೆಚ್ಚ ಭರಿಸಬೇಕಾಗಿದೆ ಎಂದು ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಸಭೆಗೆ ತಿಳಿಸಿದರು.

76 ಕಿಲೋಮೀಟರ್‌ ಜಾಲ: ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯ ಪಾಲಕ ಅಭಿಯಂತರ ಜಯಕುಮಾರ್ ಅವರು ಮಾತನಾಡಿ, ಕುಶಾಲನಗರದ ಹಿಂದಿನ ಪಟ್ಟಣ ಪಂಚಾಯತಿ ವ್ಯಾಪ್ತಿ ಮುಳ್ಳುಸೋಗೆ ಗ್ರಾಮ ಮತ್ತು ಗುಮ್ಮನ ಕೊಲ್ಲಿ ಗ್ರಾಮಗಳಲ್ಲಿ ಒಟ್ಟು 76 ಕಿಲೋಮೀಟರ್ ಉದ್ದ ಒಳಚರಂಡಿ ಜಾಲ ಅಳವಡಿಸಲಾಗಿದೆ ಎಂದರು.

ಪಟ್ಟಣ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಯಲ್ಲಿನ ಶೌಚಾಲಯ ಸ್ನಾನಗೃಹ ಹಾಗೂ ಅಡುಗೆಮನೆಯ ತ್ಯಾಜ್ಯ ನೀರನ್ನು ಮಾತ್ರ ಪಟ್ಟಣದ ಒಳಚರಂಡಿ ವ್ಯವಸ್ಥೆಗೆ ಬಿಡುವುದು ಈ ಸಂಬಂಧ ಶೌಚಾಲಯ ಸ್ನಾನ ಗೃಹ ಹಾಗೂ ಅಡುಗೆ ಮನೆಗಳಿಂದ ಕೊಳವೆ ಸಾಲು ಅಳವಡಿಸಿ ಜಂಕ್ಷನ್ ಚೇಂಬರ್ ನಿರ್ಮಿಸಿ ಕಾಮನ್ ಚೇಂಬರ್ ಮೂಲಕ ಅಳವಡಿಸಿರುವ ಮುಖ್ಯ ಚೇಂಬರ್ ಮೂಲಕ ಜೋಡಣೆ ಕೆಲಸ ನಡೆಯಬೇಕಾಗಿದೆ ಎಂದರು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿಪಿ ಶಶಿಧರ್ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಆಡಳಿತ ಅಧಿಕಾರಿ ನಿತಿನ್ ಚಿಕ್ಕಿ, ಒಳಚರಂಡಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಜಯಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ಸಹಾಯಕ ಇಂಜಿನಿಯರ್ ಅಭಿಷೇಕ್ ಕುಶಾಲನಗರ ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್, ಇಂಜಿನಿಯರ್ ಅರ್ಬಸ್ ಅಹಮದ್ ಇದ್ದರು.