ಕನ್ನಡಪ್ರಭ ವಾರ್ತೆ ಕಾರ್ಕಳ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಹಬ್ಬ ಆಚರಣೆ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್. ಅಧ್ಯಕ್ಷತೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಜನಪದ ಕಲಾವಿದ ನರಸಿಂಹ ಪರವರವರು ಫಲವತ್ತತೆಯ ಹಾಗೂ ಸಮೃದ್ದಿಯ ಸಂಕೇತವಾಗಿ ತೆಂಗಿನ ಸಿಂಗಾರವನ್ನು ಅರಳಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ “ಹಿಂದಿನ ಜನಪದ ಆಚರಣೆ ಮತ್ತು ಇಂದಿನ ವೈಜ್ಞಾನಿಕ ಮನೋಭಾವ-ಜಿಜ್ಞಾಸೆಗಳು” ಎಂಬ ವಿಷಯದ ಬಗ್ಗೆ ಮಾತನಾಡಿದರು. ಜನಪದ ಕಲೆಗಳನ್ನು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸುವಲ್ಲಿ ಇಂದಿನ ಯುವ ಜನರ ಕಾರ್ಯ ಮತ್ತು ಜವಬ್ದಾರಿಗಳನ್ನು ತಿಳಿಸಿದರು.ಮುಖ್ಯ ರಂಗಕರ್ಮಿ ಸುಮನಸಾ ಕೊಡವೂರು ಕಲಾ ತಂಡದ ಕಲಾವಿದ ದಿವಾಕರ ಕಟೀಲು ಕರಾವಳಿ ಜನಪದ ಕಲೆಗಳ ಪ್ರಧಾನ ಹಿಮ್ಮೇಳವಾದ್ಯವಾದ ಡೋಲನ್ನು ಭಾರಿಸಿ ಜನಪದ ವಸ್ತು ಪ್ರದರ್ಶನ ಹಾಗೂ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಜಾನಪದ ಮತ್ತು ರಂಗಭೂಮಿಯ ಅವಿನಾಭಾವ ಸಂಬಂಧಗಳನ್ನು ಹಲವು ಉಲ್ಲೇಖಗಳ ಮೂಲಕ ವಿದ್ಯಾರ್ಥಿಗಳಿಗೆ ಚಿತ್ರಿಸಿದರು. ಮೈಸೂರಿನ ಚಾಮರಾಜ ನಗರದ ಸೋಲಿಗರನ್ನು ಉದಾಹರಿಸಿ ರಂಗಗೀತೆಯನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗ್ಡೆ ಎಸ್. ಮಾತನಾಡಿ ‘ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಮೂಲಧಾರವಾಗಿದ್ದು. ಅವುಗಳ ವಿನಾಶಕ್ಕೆ ನಾವು ಎಡೆ ಮಾಡಿಕೊಡಬಾರದು. ತುಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಹಾಗೂ ಕಲೆಗಳ ಮಹತ್ವವನ್ನು ಉದಾಹರಣೆ ಸಹಿತ ವಿವರಿಸುತ್ತಾ ಅವರು ವಿದ್ಯಾರ್ಥಿಗಳಿಗೆ ಅವುಗಳ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಮೂರು ದಿನಗಳ “ರಂಗತರಬೇತಿ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಜನಪದ ಹಬ್ಬ ಆಚರಣೆ ಪ್ರಯುಕ್ತ ಕಾಲೇಜಿನ ಆವರಣವನ್ನು ಹಸಿರು ತಳಿರು ತೋರಣಗಳಿಂದ ಕರಾವಳಿ ಸಂಪ್ರದಾಯದಂತೆ ಅಲಂಕರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಜನಪದ ವಸ್ತು ಪ್ರದರ್ಶನ, ನೃತ್ಯ ಪ್ರದರ್ಶನ, ಗೀತ ಗಾಯನ, ಆಹಾರ ಮೇಳ, ಜನಪದ ಉಡುಗೆ -ತೊಡುಗೆ ಪ್ರದರ್ಶನ ಹಾಗೂ ಜನಪದ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಚೈತ್ರ ಸ್ವಾಗತಿಸಿ, ಭೂಮಿಕ ವಂದಿಸಿದರು ಅಕ್ಷಯ ಮತ್ತು ತಂಡದವರು ಪ್ರಾರ್ಥಿಸಿದರು. ಕೃತಿಕ್ ಅತಿಥಿಗಳನ್ನು ಪರಿಚಯಿಸಿದರು ಕುಮಾರಿ ಸ್ನೇಹ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.