ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಲ್ಲಿ ಜಾನಪದ ಉತ್ಸವ-2025ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಮಹಾನಗರದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡೆಗಳ ಪರಿಚಯವೇ ಇರಲ್ಲ. ಅವರಿಗೆ ಕ್ರಿಕೆಟ್, ಶಟ್ಟಲ್ ಕಾಕ್ ಫುಟ್ಬಾಲ್ ಬಿಟ್ಟರೆ ಬೇರೆ ಆಟವೇ ಗೊತ್ತಿರುವುದಿಲ್ಲ. ಈ ಹಿಂದೆ ಬೇಸಿಗೆ ರಜೆ ಬಂದರೆ ನಾವು ಕಬಡ್ಡಿ, ಖೋಖೋ, ಚಿಲ್ಲಿ ದಾಂಡು, ಲಗೋರಿ, ಮರಕೋತಿ, ಬುಗರಿ, ಗೋಲಿ, ಈಜು ಇತ್ಯಾದಿ ಗ್ರಾಮೀಣ ಕ್ರೀಡೆಗಳೇ ನಮಗೆ ಮನರಂಜನೆಯಾಗಿತ್ತು. ಈಗಿನ ಮಕ್ಕಳಿಗೆ ಪೋಷಕರು ಬೇಸಿಗೆ ರಜೆ ಬಂದಗೆ ಶಿಬಿರಗಳಲ್ಲಿ ಹಾಕಿ ಕೂಡಿ ಹಾಕಿ ಗ್ರಾಮೀಣ ಕ್ರೀಡೆ ಅರಿವಿಲ್ಲದಂತೆ ಮಾಡಿದ್ದಾರೆ. ಇಂತಹ ಕ್ರೀಡೆಗಳು ನಶಿಸದಂತೆ ಸರ್ಕಾರ ಗ್ರಾಮೀಣ ಉತ್ಸವದ ಮೂಲಕ ದೇಶೀ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಬಾಯಿಂದ ಬಾಯಿಗೆ ಬಂದದ್ದೇ ಜಾನಪದ: ಜಾನಪದ ಹಾಡುಗಳಿಗೆ ಯಾರು ಕರ್ತೃ ಎಂಬುದು ತಿಳಿದಿಲ್ಲ. ಬಾಯಿಂದ ಬಾಯಿಗೆ ಹಾಡನ್ನು ಹೇಳುವ ಮೂಲಕ ಜಾನಪದ ಹಾಡುಗಳು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಎಲ್ಲಿ ಶುಭ ಸಮಾರಂಭಗಳು ನಡೆಯುತ್ತದೆಯೋ ಅಲ್ಲಿ ಸೋಬಾನೆ ಪದ ಹಾಡುವ ಅಜ್ಜಿರನ್ನು ಹೆಚ್ಚಾಗಿ ಕಾಣುತ್ತಿದ್ದೆವು. ಹಿಂದಿನ ದಿನಗಳಲ್ಲಿ ಮದುವೆ ಸಮಾರಂಭದಲ್ಲಿ ಭತ್ತ ಕುಟ್ಟುವುದರಿಂದ ಚಪ್ಪರ ಹಾಕುವವರೆಗೂ ಎಲ್ಲಾ ಕೆಲಸವನ್ನು ಗ್ರಾಮಸ್ಥರು ಒಟ್ಟಾಗಿ ಸೇರಿ ಮಾಡುತ್ತಿದ್ದರು. ಆ ವೇಳೆ ಆಯಾಸ ಮರೆಯಲು ಸೋಬಾನೆ ಪದಗಳನ್ನು ಹಾಡುತ್ತಿದ್ದರು. ಆದರೆ ಈಗ ಮದುವೆ ಸಂಭ್ರಮವೂ ಇಲ್ಲ, ಮನೆಯಲ್ಲಿ ಮಾಡುವ ತಿಂಡಿಯೂ ಕಾಣೆ, ಹಬ್ಬಗಳಲ್ಲೂ ಬೇಕರಿಯಿಂದ ತಿಂಡಿ ತಂದು, ಸಂಸ್ಕೃತಿಯನ್ನೇ ಮರೆಯುತ್ತಿದ್ದೇವೆ. ಕಾಲ ಹೀಗೆ ಇರುವುದಿಲ್ಲ ಹಿಂದಿನ ಆಚಾರ ವಿಚಾರಗಳು ಮತ್ತೆ ಮುನ್ನಲೆಗೆ ಬರಲಿದೆ ಎಂದು ಬಾಲಕೃಷ್ಣ ಹೇಳಿದರು.ರಾಜ್ಯ ಜಾನಪದ ಸಂಗೀತ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘ ಅಧ್ಯಕ್ಷ ಡಾ.ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಜಾನಪದ ಉತ್ಸವ ಕಾಲೇಜುಗಳಲ್ಲಿ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಜನಪದವನ್ನು ಯಾರೂ ಮರೆಯುವಂತಿಲ್ಲ. ಹಿಂದಿನಿಂದಲೂ ನಮ್ಮೊಂದಿಗೆ ಬೆರೆತುಕೊಂಡಿರುವ ಜಾನಪದದೊಂದಿಗೆ ನಾವು ಬೆಳೆದಿದ್ದು, ನಮ್ಮ ಕಲೆ ಸಂಸ್ಕಾರಗಳನ್ನು ಜನಪದ ರೂಢಿಸಿಕೊಂಡಿದೆ. ಇಂದಿನ ಯುವಕರು ಜನಪದದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಬಾಲಕೃಷ್ಣ ಜನಪದ ಉತ್ಸವ ಆರಂಭಕ್ಕೂ ಮೊದಲು ಎತ್ತಿನಗಾಡಿ ಓಡಿಸುವ ಮೂಲಕ ಜಾನಪದ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಗೋಲಿ ಆಟ ಆಡುವ ಮೂಲಕ ಗಮನ ಸೆಳೆದರು ನಂತರ ವಿದ್ಯಾರ್ಥಿಗಳು ಮಾಡಿದ ತಿಂಡಿಗಳ ರುಚಿ ಸವಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಡಿ.ರಾಜಣ್ಣ, ಮೈತ್ರಿ ಕನ್ನಡ ಸಂಚಾಲಕ ಆರ್.ಶ್ರೀಧರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಲ್.ನಂಜಯ್ಯ, ಅಬ್ದುಲ್ ರೆಹಮಾನ್, ಪ್ರೇಮ, ಲಕ್ಷ್ಮೀನಾರಾಯಣ್, ಕಿರಣ್ ಕುಮಾರ್, ಡಾಬಾ ರಮೇಶ್, ಚಂದ್ರಶೇಖರ್, ಕಲ್ಕೆರೆ ಶಿವಣ್ಣ, ಟಿಎಪಿಸಿಎಂಎಸ್ ಮಂಜುನಾಥ್ ಭಾಗವಹಿಸಿದ್ದರು.