ಹೂವಿನಹಡಗಲಿ: ಸಾಹಿತ್ಯ ಗ್ರಾಮೀಣ ಜನರ ಬದುಕಿನ ಪ್ರತಿಬಿಂಬವಾಗಿದ್ದು, ಬಾಲ್ಯದಿಂದ ವೃದ್ಧಾಪ್ಯದವರೆಗೆ ಸಮಯ, ಸನ್ನಿವೇಶಕ್ಕೆ ತಕ್ಕಂತೆ ಸಾಂದರ್ಭಿಕವಾಗಿ ರೂಪುಗೊಂಡಿದೆ. ಇದು ತಲೆಮಾರಿನಿಂದ ತಲೆಮಾರಿಗೆ ಹರಿದಾಡಿದ ಮೌಖಿಕ ಪರಂಪರೆಯಾಗಿದೆ ಎಂದು ಕಸಾಪ ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್. ಸತೀಶ ತಿಳಿಸಿದರು.
ಜನರಿಗಾಗಿ, ಜನರಿಂದ ಸೃಷ್ಟಿಯಾದ ಈ ಸಾಹಿತ್ಯವನ್ನು ಮೂರು ವಿಧಗಳಲ್ಲಿ ಅಧ್ಯಯನ ಮಾಡಲಾಗುತ್ತಿದ್ದು, ಜನಪದ ಗೀತೆ, ನೃತ್ಯ, ಅಡುಗೆ, ಗಾದೆ, ಒಗಟು ಇತ್ಯಾದಿ ಜಾನಪದ ಎಲ್ಲ ಪ್ರಕಾರಗಳ ಒಟ್ಟುಗೂಡಿಸುವುದು. ಜನಪದ, ಜಾನಪದದ ಶಾಸ್ತ್ರಬದ್ಧ ಅಧ್ಯಯನವೇ ಜನಪದ ವಿಜ್ಞಾನವಾಗಿದೆ ಎಂದರು.
ಜಿಬಿಆರ್ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಎಸ್. ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದತ್ತಿದಾನಿಗಳು ವಿಭಿನ್ನವಾದ ವಿಷಯಗಳನ್ನು ನೀಡಿರುವುದು, ಅವುಗಳ ಅರ್ಥಪೂರ್ಣ ಚರ್ಚೆ ಸಮಕಾಲೀನ ಪರಿಸ್ಥಿತಿಯಲ್ಲಿ ನಡೆಯುವಂತಾಗಬೇಕಿರುವುದು ಇಂದಿನ ಅಗತ್ಯ. ಈ ದಿಸೆಯಲ್ಲಿ ಸಾಹಿತ್ಯ ಪರಿಷತ್ತು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.ಸಾಹಿತಿ ಎಸ್.ಎಂ. ಕೂಡಯ್ಯ ಜನಪದ ತ್ರಿಪದಿಗಳನ್ನು ವಾಚಿಸಿ ಅರ್ಥೈಸಿದರು. ದತ್ತಿದಾನಿ ವಿ.ಸಿ. ಪಾಟೀಲ್, ಸಾಹಿತಿ ಪಿ. ಕರವೀರನಗೌಡ ಕಾಲೇಜು ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಬಿ. ಯುವರಾಜಗೌಡ, ರಕ್ಷಿತಾ ಶಾನುಭೋಗರ ಜಾನಪದ ಗೀತೆಗಳ ಗಾಯನ ಮೆಚ್ಚುಗೆ ಪಡೆಯಿತು.
ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೈ. ಚಂದ್ರಬಾಬು ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಎ.ಎಂ. ಚನ್ನವೀರಸ್ವಾಮಿ ವಂದಿಸಿದರು. ಉಪನ್ಯಾಸಕಿ ಕೆ. ಅಶ್ವಿನಿ ನಿರ್ವಹಿಸಿದರು.