ನಾಗೇಗೌಡರ ಪರಿಶ್ರಮದ ಫಲವೇ ಜಾನಪದ ಲೋಕ: ಪ್ರೊ.ಬೋರಲಿಂಗಯ್ಯ

KannadaprabhaNewsNetwork | Published : Oct 16, 2024 12:30 AM

ಸಾರಾಂಶ

ಕಾರ್ಯಕ್ರಮದಲ್ಲಿ ಅನುಕುಮಾರ್, ರಂಗಪ್ಪ, ಕಿರಣ್, ಶಂಕರಶೆಟ್ಟಿ, ಮಂಜುನಾಥ್, ಲಕ್ಷ್ಮಣ್ ಗೌಡ, ಚಾಲಕ ಡಿ.ಆರ್. ಮಂಜುನಾಥ, ಮೋಹನ ಕುಮಾರ್, ಶಿವಕುಮಾರ್, ಪುಟ್ಟಸ್ವಾಮಿಗೌಡ, ಪುಟ್ಟೇಗೌಡ, ಮಂಚೇಗೌಡ, ಶಶಿಕುಮಾರ್, ಯೋಗಾನಂದ, ಸುಮಂತ್, ಡಿ.ಆರ್.ಮಹೇಶ್ ರಂಗದ ಕುಣಿತವನ್ನು ಪ್ರದರ್ಶಿಸಿದರು.

ರಾಮನಗರ: ಜಾನಪದ ಲೋಕ ವಿಶ್ವಸಂಸ್ಥೆಯ ಅಮೂರ್ತ ಸಾಂಸ್ಕೃತಿಕ ಪಟ್ಟಿಯಲ್ಲಿ ಸೇರುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನಾಡೋಜ ಎಚ್.ಎಲ್.ನಾಗೇಗೌಡರ ಪರಿಶ್ರಮವೇ ಕಾರಣ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ‘ಲೋಕಸಿರಿ- 99’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಗೇಗೌಡರ ಪರಿಶ್ರಮ, ಜನಪದ ಕಲೆಗಳ ದಾಖಲೀಕಣ, ಕಲೆ- ಕಲಾವಿದರಿಗೆ ಗೌರವಿಸುತ್ತಿರುವುದರಿಂದ ಇಂದು ಜಾನಪದ ಲೋಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ರಂಗದ ಕುಣಿತ ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ಕಲಾವಿದ ಕೃಷ್ಣೇಗೌಡರ ಸಾಧನೆಯನ್ನು ಮೆಚ್ಚಿ ಜಾನಪದ ಪರಿಷತ್ತು ಗೌರವಿಸಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಮಾತನಾಡಿ, ನಾಗೇಗೌಡರ ಪರಿಶ್ರಮದ ಫಲ ಜಾನಪದ ಲೋಕ. ಇಂದಿನ ತಲೆಮಾರಿನ ಮಕ್ಕಳಿಗೆ ಜಾನಪದ ಲೋಕದ ವಸ್ತುಸಂಗ್ರಹಾಲಯದ ವಸ್ತುಗಳನ್ನು ತೋರಿಸಬೇಕಿದೆ ಎಂದು ತಿಳಿಸಿದರು.

ಕಲಾವಿದ ಕೃಷ್ಣೇಗೌಡ ಮಾತನಾಡಿ, ನಾಗೇಗೌಡರು ನಮ್ಮ ತಂಡದವರಿಂದ ನೀರ್‌ ದಿಮ್ಮವ್ವನ ಕಥೆಯನ್ನು ದಾಖಲಿಸಲು ಪತ್ರಗಳನ್ನು ಕಳುಹಿಸಿದ್ದರು. ಆದರೆ ನನಗೆ ಅಕ್ಷರ ಜ್ಞಾನ ಇಲ್ಲದಿದ್ದರಿಂದ ಆಗಲಿಲ್ಲ ಎಂದು ತಿಳಿಸಿ. ಕಾರ್ಯಕ್ರಮದಲ್ಲಿ ರಂಗದ ಕುಣಿತದ ಹದಿನೈದು ವರಸೆಗಳಲ್ಲಿ ಗೆಜ್ಜೆ ಕುಣಿತ, ಸುಗ್ಗಿಕುಣಿತ, ತಿಪ್ಪುರು, ಸುತ್ತುಕುಣಿತ, ಕೊಕ್ಕೆಕಾಲು, ಹಲಹುಲಿಯ ಕೆಲವು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಅನುಕುಮಾರ್, ರಂಗಪ್ಪ, ಕಿರಣ್, ಶಂಕರಶೆಟ್ಟಿ, ಮಂಜುನಾಥ್, ಲಕ್ಷ್ಮಣ್ ಗೌಡ, ಚಾಲಕ ಡಿ.ಆರ್. ಮಂಜುನಾಥ, ಮೋಹನ ಕುಮಾರ್, ಶಿವಕುಮಾರ್, ಪುಟ್ಟಸ್ವಾಮಿಗೌಡ, ಪುಟ್ಟೇಗೌಡ, ಮಂಚೇಗೌಡ, ಶಶಿಕುಮಾರ್, ಯೋಗಾನಂದ, ಸುಮಂತ್, ಡಿ.ಆರ್.ಮಹೇಶ್ ರಂಗದ ಕುಣಿತವನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ದಬ್ಬೆಘಟ್ಟದ ರಂಗದ ಕುಣಿತ ಕಲಾವಿದ ಕೃಷ್ಣೇಗೌಡ ಅವರನ್ನು ಗೌರವಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಕ್ಯೂರೇಟರ್ ಡಾ.ರವಿ ಯು.ಎಂ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ರಂಗಸಹಾಯಕ ಪ್ರದೀಪ್, ಸಂಶೋಧನಾ ಸಂಚಾಲಕ ಡಾ. ಸಂದೀಪ್ ಕೆ.ಎಸ್, ಜಾನಪದ ಲೋಕದ ಸಿಬ್ಬಂದಿ, ಡಿಪ್ಲೊಮಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article