ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ 45ನೇ ಜಾನಪದ ಕಲಾಮೇಳದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಮಾಜ ಮತ್ತು ನಾಡಿಗೆ ಸೇವೆ ಸಲ್ಲಿಸಿರುವವರನ್ನು ಮರೆಯುವುದೇ ಹೆಚ್ಚಾಗಿರುವ ಇಂತಹ ಸಮಯದಲ್ಲಿ ಆದಿಚುಂಚನಗಿರಿ ಶ್ರೀಮಠ ಶಿಕ್ಷಣ, ಆರೋಗ್ಯ, ಪರಿಸರ, ಆಧ್ಯಾತ್ಮ, ಸಂಸ್ಕೃತಿ, ಕಲೆ ಇವೆಲ್ಲದರ ಸಮ್ಮಿಳಿತವಾದ ಒಂದು ಸಾಮಾಜಿಕ ಆಧ್ಯಾತ್ಮಿಕ ಕ್ರಾಂತಿಯನ್ನೇ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಗತ್ತಿನ ಕಲಾ ಪರಂಪರೆಗೆ ಜಾನಪದವೇ ಮೂಲ. ಸಮಾಜದ ಆತ್ಮವಾಗಿರುವ ಈ ಸಂಸ್ಕೃತಿ ಕಲೆ ಜೀವಂತವಾಗಿ ಉಳಿಯಬೇಕು. ಶ್ರಮಿಕ ವರ್ಗದ ಜನರಿಂದ ಹುಟ್ಟಿಕೊಂಡಿರುವ ಇಂತಹ ಕಲೆಯನ್ನು ಕಳೆದ ನಾಲ್ಕು ದಶಕಗಳಿಂದ ಪೋಷಣೆ ಮಾಡುತ್ತಿರುವ ಶ್ರೀಮಠವು ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರನ್ನು ಕರೆಸಿ ಜನಪದ ಕಲೆಗಳ ಉಳಿವಿಗೆ ಶ್ರಮಿಸುತ್ತಿದೆ. ಇದಕ್ಕೆ ಭೈರವೈಕ್ಯಶ್ರೀಗಳ ಪರಿಶ್ರಮ ಅಪಾರ ಎಂದರು.
ನಾಲ್ವರು ಮಹನೀಯರು ಬದುಕಿನ ಯಶಸ್ಸಿಗೆ ಕಾರಣವಾದ ಸಾಧನೆಯ ದ್ಯೋತಕವಾಗಿ ಇಂದು ಚುಂಚಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜಾನಪದ ಕಲಾವಿದರು ಹಾಗೂ ಚುಂಚಶ್ರೀ ಪ್ರಶಸ್ತಿ ಪಡೆದಿರುವ ಸಾಧಕರಂತೆ ಇಂದಿನ ಯುವಕರೂ ಕೂಡ ಮಹತ್ವವನ್ನು ಸಾಧಿಸಿ ನಾಡಿನ ಹಿರಿಮೆಯನ್ನು ಬೆಳಗಿಸುವ ಬೆಳಕಾಗಬೇಕು ಎಂದರು.
ಈ ಸಾಧಕರ ಅನೌಪಚಾರಿಕ ಮಾರ್ಗದರ್ಶನ ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಶ್ರೀಮಠದಿಂದ ಇಂತಹ ನೂರಾರು ಸಾರ್ಥಕ ಕಾರ್ಯಗಳು ಸದಾ ಮುಂದುವರಿಯಲಿ. ಭೈರವೈಕ್ಯ ಶ್ರೀಗಳೊಂದಿಗಿನ ತಮ್ಮ ಒಡನಾಟ ಬಾಂಧವ್ಯಗಳು ವಯಸ್ಸನ್ನು ಮೀರಿದ್ದು, ಭಾವನೆ ಮತ್ತು ಮಾತೃತ್ವಕ್ಕೆ ಸಂಬಂಧಿಸಿದ್ದು ಎಂದರು.
ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಯೊಂದಿಗೆ ಶ್ರೀಗಳು ಮತ್ತು ಗಣ್ಯರನ್ನು ಸ್ವಾಗತಿಸಿದರು. ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಸುರೇಶ್‌ಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಸೌಮ್ಯನಾಥಸ್ವಾಮೀಜಿ, ಮಂಗಳನಾಥಸ್ವಾಮೀಜಿ, ಗುಣನಾಥಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಎ.ಶೇಖರ್ ಸೇರಿದಂತೆ ಹಲವು ಗಣ್ಯರು ಮತ್ತು ಸಹಸ್ರಾರು ಮಂದಿ ಭಕ್ತರು ಇದ್ದರು.