ರಾಣಿಬೆನ್ನೂರು: ಜಾನಪದ ವಸ್ತು ಸಂಗ್ರಹಾಲಯ ಈ ನೆಲದ ಶೇ.75ರಷ್ಟು ಜನರ ಜೀವನ ಮೀಮಾಂಸೆಯನ್ನು ಅನಾವರಣ ಮಾಡುವ ವಿಶಿಷ್ಟ ಪಠ್ಯವಾಗಿದೆ ಎಂದು ಜಾನಪದ ವಸ್ತು ಸಂಗ್ರಹಾಲಯದ ಅಂತರಾತ್ಮ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಹೇಳಿದರು.
ವಸ್ತು ಸಂಗ್ರಹಾಲಯದಲ್ಲಿರುವ ವಸ್ತುಗಳು ಬಹುಮುಖಿ ಸಂಸ್ಕೃತಿಯನ್ನು ವೈವಿಧ್ಯಮಯವಾಗಿ ಹೇಳುತ್ತವೆ. ಇವುಗಳಲ್ಲಿ ನೆಲದ ಚರಿತ್ರೆ ಮತ್ತು ಬದುಕು ಇದೆ. ಇವು ಆಯಾ ಪ್ರದೇಶದ ಪಾರಂಪರಿಕ ಜ್ಞಾನ, ಪಾರಂಪರಿಕ ಕೌಶಲ್ಯ, ಸೃಜನಶೀಲತೆ, ಕಲಾತ್ಮಕತೆ ಹಾಗೂ ಪಾರಂಪರಿಕ ಮೌಲ್ಯಗಳನ್ನು ವಿಭಿನ್ನವಾಗಿ ಹೇಳುವ ಶಕ್ತಿಯನ್ನು ಹೊಂದಿವೆ. ಇವು ಬಹುಜನರ ಬಹುಮುಖಿ ಜ್ಞಾನಗಳು. ಇದರಲ್ಲಿ ಕೃಷಿ ಜ್ಞಾನ, ಅಹಾರ ಜ್ಞಾನ, ವೈದ್ಯ ಜ್ಞಾನ, ಸೌಂದರ್ಯ ಜ್ಞಾನ, ಪರಿಸರ ಜ್ಞಾನ, ಭೂ ಅಥವಾ ಮಣ್ಣಿನ ಜ್ಞಾನ, ಪ್ರಾಣಿ ಜ್ಞಾನ, ಉಡುಪುಗಳ ಜ್ಞಾನ ಇನ್ನೂ ಮುಂತಾದ ಜ್ಞಾನಗಳು ಈ ವಸ್ತುಗಳಲ್ಲಿವೆ. ವಿಶೇಷವಾಗಿ ಈ ನೆಲದ ಶ್ರಮಜೀವಿಗಳ, ಕೃಷಿಕರ, ಕಾಡಾಡಿಗಳ, ಅಲೆಮಾರಿಗಳ, ಬುಡಕಟ್ಟುಗಳ, ಅಲಕ್ಷಿತ ಸಮುದಾಯಗಳ ಪಾರಂಪರಿಕ ಜ್ಞಾನಗಳನ್ನು ಹೇಳುತ್ತವೆ. ಇದೆ ಜಾನಪದ ವಸ್ತು ಸಂಗ್ರಹಾಲಯದ ಅಂತರಾತ್ಮ ಎಂದರು.
ಜಾಗತೀಕರಣದಿಂದ ಸ್ಥಳೀಯ ಸಂಸ್ಕೃತಿ, ಜ್ಞಾನ ಮರೆಯಾಗುತ್ತಿದೆ. ಏಕ ಸಂಸ್ಕೃತಿಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ನೆಲ ಸಂಸ್ಕೃತಿಯನ್ನು, ರಾಷ್ಟ್ರೀಯತೆಯನ್ನು ಕಟ್ಟಬೇಕಾಗಿದೆ. ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯನ್ನು ಯಶಸ್ವಿಯಾಗಿಸಬೇಕಾಗಿದೆ. ಇಂತಹ ಅಗತ್ಯ ಕಾರ್ಯಗಳಿಗೆ ಹ್ಯಾಂಟಿಕ್ ವಸ್ತುಗಳು ಅಥವಾ ವಸ್ತು ಸಂಗ್ರಹಾಲಯದ ವಸ್ತುಗಳು ಬಹುಮುಖ್ಯವಾದ ಆಕರಗಳು ಆಗುತ್ತವೆ. ಇದಲ್ಲದೆ ಹೀಗೆ ಕಟ್ಟುವ ಕಾರ್ಯಗಳಿಗೆ ಈ ವಸ್ತುಗಳು ಮಾರ್ಗದರ್ಶನ ಮಾಡುತ್ತವೆ. ಹಾಗಾಗಿ ಇವುಗಳನ್ನು ಉಳಿಸಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯ ಎಂದರು.ಪ್ರಾ. ಶಿಲ್ಪಾ ಸಾವುಕಾರ, ಆಡಳಿತ ವರ್ಗ, ಶಿಕ್ಷಕರ ವೃಂದ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.