ಜನ, ಮನ ರಂಜಿಸಿದ ಜಟ್ಟಿಗಳ ಕಾಳಗ

KannadaprabhaNewsNetwork | Published : Mar 1, 2024 2:23 AM

ಸಾರಾಂಶ

ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ನಿಮಿತ್ತ ಮಲ್ಲಮ್ಮ ಬೆಳವಡಿ ಗ್ರಾಮದ ಶ್ರೀ ಈಶಪ್ರಭು ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಗುರುವಾರ ಸಂಜೆ ಆಯೋಜಿಸಲಾಗಿದ್ದ 25 ಜತೆ ನಿಕಾಲಿ ಕುಸ್ತಿ ಪಂದ್ಯಾವಳಿಗಳು ರೋಚಕವಾಗಿ ನಡೆದವು.

ಉದಯ ಕೊಳೇಕರ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ನಿಮಿತ್ತ ಮಲ್ಲಮ್ಮ ಬೆಳವಡಿ ಗ್ರಾಮದ ಶ್ರೀ ಈಶಪ್ರಭು ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಗುರುವಾರ ಸಂಜೆ ಆಯೋಜಿಸಲಾಗಿದ್ದ 25 ಜತೆ ನಿಕಾಲಿ ಕುಸ್ತಿ ಪಂದ್ಯಾವಳಿಗಳು ರೋಚಕವಾಗಿ ನಡೆದವು.

ಪೈಲ್ವಾನರು ಕುಸ್ತಿ ಕಣದ ಕೆಂಪು ಮಣ್ಣಿನಲ್ಲಿ ಮಿಂದೆದ್ದು ವಿಜಯದ ನಗೆ ಬೀರಿ ಸಂತಸಗೊಂಡರು. ಕುಸ್ತಿ ಕಣದ ತುಂಬ ಸೇವಂತಿಗೆ ಹೂ ರಾಶಿ ಹಾಕಿ ಸಿಂಗರಿಸಲಾಗಿತ್ತು. ಪೈಲ್ವಾನರನ್ನು ಶಿಳ್ಳೆ ಹಾಕಿ ಚಪ್ಪಾಲೆ ತಟ್ಟಿ ಹುರುದುಂಬಿಸುತ್ತಿದ್ದ ಕ್ರೀಡಾಭಿಮಾನಿಗಳ ಪ್ರೋತ್ಸಾಹ ಜಟ್ಟಿಗಳಿಗೆ ಶಕ್ತಿ ಪ್ರದರ್ಶನಕ್ಕೆ ಸ್ಫೂರ್ತಿ ತುಂಬಿತು. ಕುಸ್ತಿ ಮೈದಾನದ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಕುಸ್ತಿ ಪಟುಗಳ ಕಲಾ ಕೌಶಲ ನೋಡಿ ಖುಷಿಪಟ್ಟರು.

ಪುರುಷರ ಮೊದಲ ಜೋಡಿ ಕುಸ್ತಿಯಲ್ಲಿ ಹಾವೇರಿಯ ಪೈ. ಕಾರ್ತಿಕ ಕಾಟೆ ಉತ್ತರಪ್ರದೇಶಶದ ಪೈ. ಸಚಿನ ಯಾದವ ಕಾಳಗದಲ್ಲಿ ಕಾರ್ತಿಕಗೆ ವಿಜಯ ಮಾಲೆ ಒಲಿಯಿತು. ಎರಡನೇ ಜೋಡಿಯಲ್ಲಿ ಧಾರವಾಡದ ಪೈ.ನಾಗರಾಜ ಬಸಿಡೋಣಿ ಜತೆ ಪಂಜಾಬಿನ ಪೈ. ಕರಣಕುಮಾರ ನಡುವಿನ ಜಂಗೀ ನಿಕಾಲಿಯಲ್ಲಿ ನಾಗರಾಜ ಗೆಲುವು ಕಂಡರು. ತುರುಸಿನಿಂದ ಕೂಡಿದ್ದ ಮೂರನೇ ಜೋಡಿ ಕುಸ್ತಿಯಲ್ಲಿ ಕೋಹಳ್ಳಿಯ ಪೈ. ಸಂಗಮೇಶ ಬಿರಾದಾರ ಜತೆ ಸಾಂಗಲಿಯ ಪೈ. ಚಾಸೀಮ್ ಪಾಠನ ಸೆಣಸಿ ಚಾಸೀಮರವರನ್ನು ಮಣಿಸಿದರು. ಮಹಿಳಾ ಕುಸ್ತಿ ವಿಬಾಗದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಟುಗಳಾದ ಪೈ. ಮನಿಶಾ ಸಿದ್ದಿ ಹಳಿಯಾಳ ಹಾಗೂ ಮಹಾರಾಷ್ಟ್ರದ ಸಾಧನ ನಡುವಿನ ಕಾಳಗ ಸಮಬಲದಲ್ಲಿ ಕೊನೆಯಾಯಿತು. ಮುಧೋಳದ ಪೈ. ಪ್ರತೀಕ್ಷಾ ಮಹಾರಾಷ್ಟ್ರದ ಪೈ.ದೀಪಾಲಿ ಜೋಡಿಯಲ್ಲಿ ದೀಪಾಲಿ ಸೋಲುಂಡರು. ಕಂಗ್ರಾಳಿಯ ಪೈ. ಸ್ವಾತಿ ಪಾಟೀಲ ಮಹಾರಾಷ್ಟ್ರದ ಅಮೃತಾ ಮಿರಗೆ ನಡುವಿನ ಕಾಳಗದಲ್ಲಿ ಅಮೃತಾ ಮೀರಗೆ ನೆಲಕ್ಪೃಚ್ಚಿದರು. ಇನ್ನುಳಿದ ಎಲ್ಲ ಕುಸ್ತಿ ಪಂದ್ಯಾಟಗಳು ರೋಚಕತೆಯಿಂದ ಕೂಡಿ ನೋಡುಗರನ್ನು ರೋಮಾಂಚನಗೊಳಿಸಿದವು.

ಬೈಲಹೊಂಗಲ ತಹಸೀಲ್ದಾರ್‌ ಸಚ್ಚಿದಾನಂದ ಕುಚನೂರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಜಿಲ್ಲಾ ನಿರ್ದೇಶಕ ಶ್ರೀನಿವಾಸ, ಬೆಳವಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಸದಸ್ಯರಾದ ಈರಣ್ಣ ತುರಾಯಿ, ವಿಶ್ವನಾಥ ಕರೀಕಟ್ಟಿ, ಬಸವರಾಜ ನರೆಗಲ್ಲ, ಮಾಜಿ ಪೈಲ್ವಾನರಾದ ನಿಂಗಪ್ಪ ಕರೀಕಟ್ಟಿ, ರಾಜೇಸಾಬ ಉಗರಗೋಳ, ಅಶೋಕ ಕಡಕೋಳ, ಮಹಾಂತೇಶ ತುರಮರಿ, ದೈಹಿಕ ಶಿಕ್ಷಣ ಶಿಕ್ಷಕ ಎ.ಎಸ್. ಭದ್ರಶೆಟ್ಟಿ ತುಕಾರಾಂ, ಶಂಕರೆಪ್ಪ ಗುಗ್ಗರಿ, ಮತ್ತಿತರರು ಹಾಗೂ ಊರಿನ ಹಿರಿಯರು, ಪಂಚರು, ಕುಸ್ತಿ ಅಭಿಮಾನಿಗಳು ಉಪಸ್ಥಿತರಿದ್ದರು.

Share this article