ಸಾಲ ವಸೂಲಾತಿಗೆ ಆರ್‌ಬಿಐ ನಿರ್ದೇಶನ ಅನುಸರಿಸಿ: ಡಾ. ವಿಕ್ರಂ ಅಮಟೆ

KannadaprabhaNewsNetwork |  
Published : Jan 31, 2025, 12:49 AM IST
ಚಿಕ್ಕಮಗಳೂರು ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಹಾಗೂ ಎಸ್‌ಪಿ ಡಾ. ವಿಕ್ರಂ ಅಮಟೆ ನೇತೃತ್ವದಲ್ಲಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು, ಹಣಕಾಸು ಸಂಸ್ಥೆಗಳಲ್ಲಿ ಸಾಲದ ಕಂತು ಕಟ್ಟಲು ತಪ್ಪಿದ ಗ್ರಾಹಕರೊಂದಿಗೆ ವ್ಯವಹರಿಸಲು ಕಡ್ಡಾಯವಾಗಿ ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸಬೇಕು ಹಾಗೂ ಹಣಕಾಸು ಸಂಸ್ಥೆಯಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿಯನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಎಸ್ಪಿ ಕಚೇರಿ ಸಭಾಂಗಣದಲ್ಲಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಣಕಾಸು ಸಂಸ್ಥೆಗಳಲ್ಲಿ ಸಾಲದ ಕಂತು ಕಟ್ಟಲು ತಪ್ಪಿದ ಗ್ರಾಹಕರೊಂದಿಗೆ ವ್ಯವಹರಿಸಲು ಕಡ್ಡಾಯವಾಗಿ ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸಬೇಕು ಹಾಗೂ ಹಣಕಾಸು ಸಂಸ್ಥೆಯಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿಯನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಂಸ್ಥೆಯ ವ್ಯವಹಾರದ ಪದ್ಧತಿಗಳು ಗ್ರಾಹಕ ಸ್ನೇಹಿ ಮತ್ತು ನ್ಯಾಯ ಸಮ್ಮತವಾಗಿರಬೇಕು. ಗ್ರಾಹಕರು ಮರುಪಾವತಿ ಮಾಡಲು ಕಷ್ಟದಲ್ಲಿದ್ದರೆ ಸಂಸ್ಥೆ ತಮ್ಮ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದು ಸಾಲದ ಮರುಪಾವತಿಯನ್ನು ಪುನರ್‌ರಚಿಸುವ ವ್ಯವಸ್ಥೆ ಇರಬೇಕು ಎಂದು ತಿಳಿಸಿದರು.

ಯಾವುದೇ ಸಂಸ್ಥೆ ಹೊಸ ಸಿಬ್ಬಂದಿ ನೇಮಿಸಿಕೊಳ್ಳುವಾಗ ಅವರು ಹಿಂದೆ ಕೆಲಸ ಮಾಡಿರುವ ಸಂಸ್ಥೆಯೊಂದಿಗೆ ಅವರ ಪೂರ್ವ ಚಾರಿತ್ರ್ಯವನ್ನು ಪರಿಶೀಲಿಸಬೇಕು. ಅವರು ಹಿಂದೆ ಕೆಲಸ ಮಾಡಿದ ಕಿರು ಹಣಕಾಸು ಸಂಸ್ಥೆ ಕೊಟ್ಟ ಬಿಡುಗಡೆ ಪತ್ರವನ್ನು ಪಡೆಯಬೇಕು. ಒಂದು ಪಕ್ಷ ಅದನ್ನು ಹಿಂದಿನ ಸಂಸ್ಥೆ ಕೊಟ್ಟಿರದಿದ್ದರೆ 20 ದಿನಗಳ ಅವಕಾಶ ಕೊಡಬೇಕು. ಬೇರೆ ಹಣಕಾಸು ಸಂಸ್ಥೆಯಿಂದ ಬಂದವರನ್ನು ಶಾಖಾ ವ್ಯವಸ್ಥಾಪಕರು ಕನಿಷ್ಠ ಪಕ್ಷ ಒಂದು ವರ್ಷದವರೆಗೆ ಅವರು ಹಿಂದೆ ಕೆಲಸ ಮಾಡಿದ ಪ್ರದೇಶಕ್ಕೆ ನೇಮಿಸಬಾರದು ಎಂದು ಸೂಚಿಸಿದರು.

ಗ್ರಾಹಕರ ಬೇಡಿಕೆ, ಅಪೇಕ್ಷೆ, ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಅವರಿಗಿರುವ ತಿಳಿವಳಿಕೆ ಮಟ್ಟ ತಿಳಿದುಕೊಳ್ಳುವ ಹಾಗೂ ಅರಿವು ಮೂಡಿಸುವ ಸ್ವತಂತ್ರವಾದ ವ್ಯವಸ್ಥೆ ಇರಬೇಕು. ಈ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿರಬೇಕು ಹಾಗೂ ಪರೀಕ್ಷಿಸುತ್ತಿರಬೇಕು. ಸಂಸ್ಥೆಯಲ್ಲಿ ಗ್ರಾಹಕರ ಕುಂದು ಕೊರತೆಗಳನ್ನು ನೋಡಿಕೊಳ್ಳುವಂತೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕು ಹಾಗೂ ಅವರ ವಿಳಾಸ ಮತ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಗ್ರಾಹಕರಿಗೆ ಸರಳವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಕಿರು ಹಣಕಾಸಿನ ಸಂಸ್ಥೆಗಳು ಆರ್‌ಬಿಐ ಮಾರ್ಗದರ್ಶನದಂತೆ ಎಲ್ಲಾ ಅರ್ಹ ಗ್ರಾಹಕರಿಗೆ ತಮ್ಮ ಸೇವೆ ಒದಗಿಸಲು ಶ್ರಮಿಸಬೇಕು. ಆರ್‌ಬಿಐ ನಿಯೋಜಿತ ನಡಾವಳಿಯಂತೆ ಗ್ರಾಹಕರಿಗೆ ನೀಡುವ ಎಲ್ಲ ಸಾಲಗಳ ಮತ್ತು ಸೇವೆಗಳ ಷರತ್ತುಗಳನ್ನು ಹಾಗೂ ನಿಬಂಧನೆಗಳನ್ನು ಸಾಲ ವಿತರಿಸುವ ಮೊದಲೇ ದಾಖಲೆಗಳ ಮೂಲಕ ವಿವರಿಸಬೇಕು ಎಂದು ಹೇಳಿದರು.

ಗ್ರಾಹಕರು ಭರಿಸಬೇಕಾದ ಬಡ್ಡಿ ಮತ್ತು ಇತರೆ ವೆಚ್ಚಗಳನ್ನು ಒಳಗೊಂಡ ಸಾಲಿಯಾನ ದರ ಮತ್ತು ಸಮಾನ ಮಾಸಿಕ ದರವನ್ನು ಶಾಖೆಯಲ್ಲಿ ಪ್ರದರ್ಶಿಸಬೇಕು. ಗ್ರಾಹಕರು ಭರಿಸಬೇಕಾದ ಬಡ್ಡಿ ದರ ಹಾಗೂ ಭದ್ರತಾ ಠೇವಣಿ ಬಗ್ಗೆ ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸಬೇಕು. ವ್ಯವಹಾರಕ್ಕೆ ಅಗತ್ಯವಿರುವ ಗ್ರಾಹಕರ ವೈಯಕ್ತಿಕ ದಾಖಲೆ ಪತ್ರಗಳನ್ನು (ಕೆವೈಸಿ) ಮಾತ್ರ ಪಡೆಯಬೇಕು. ಗ್ರಾಹಕರಿಗೆ ಸಾಲ ಮರುಪಾವತಿ ಶಕ್ತಿಯ ಅನುಗುಣವಾಗಿ ಕೂಲಂಕುಶವಾಗಿ ಪರಿಶೀಲಿಸಿ, ಸರಿಯಾದ ಸಾಲದ ಮೊತ್ತವನ್ನು ಮಂಜೂರು ಮಾಡಬೇಕು ಎಂದು ತಿಳಿಸಿದರು.

ಗ್ರಾಹಕರು ಬೇರೆ ಯಾವುದಾದರೂ ಎರಡು ಸಂಸ್ಥೆಗಳಿಂದ ಸಾಲ ಪಡೆದಿದ್ದರೆ ಮೂರನೆ ಸಂಸ್ಥೆ ಅಂಥವರಿಗೆ ಸಾಲ ನೀಡಬಾರದು. ಸಿಬ್ಬಂದಿ ಗ್ರಾಹಕರೊಂದಿಗೆ ವ್ಯವಹರಿಸುವಾಗ ಸಂಸ್ಥೆ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸೌಜನ್ಯ ಹಾಗೂ ಗೌರವಪೂರ್ವಕವಾಗಿ ಗ್ರಾಹಕರೊಂದಿಗೆ ವರ್ತಿಸಬೇಕು. ಗ್ರಾಹಕರ ಸಂಸ್ಕೃತಿ ಸೂಕ್ಷ್ಮತೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಪರಿಸ್ಥಿತಿಯಲ್ಲಿಯೂ ಗ್ರಾಹಕರೊಂದಿಗೆ ಘರ್ಷಣೆಗೆ ಆಸ್ಪದ ಕೊಡುವ ಅಥವಾ ಬೆದರಿಕೆ ಒಡ್ಡುವ ಕೆಲಸ ಮಾಡಬಾರದು. ಆರ್‌ಬಿಐ ಮಾರ್ಗದರ್ಶನದನ್ವಯ ಸೂಕ್ತವಲ್ಲದ ಸಮಯದಲ್ಲಿ ಗ್ರಾಹಕರನ್ನು ಸಂಪರ್ಕ ಮಾಡುವುದಾಗಲಿ ಅಥವಾ ಸಾಲ ವಸೂಲಾತಿ ಮಾಡಬಾರದು. ಗ್ರಾಹಕರು ಪ್ರತಿಯೊಂದು ಕಂತು ಪಾವತಿ ಮಾಡಿದಾದ ಸಂಸ್ಥೆಯಿಂದ ನಿರ್ಧರಿಸಿದ ಸೂಕ್ತ ರಿಶೀದಿ ಪತ್ರ ನೀಡಬೇಕು ಎಂದು ಸೂಚನೆ ನೀಡಿದರು.

ಗ್ರಾಹಕರು ತಮ್ಮ ಸಾಲವನ್ನು ಮರು ಪಾವತಿ ಮಾಡದೇ ಇದ್ದಲ್ಲಿ ಸಂಸ್ಥೆ ಅನುಮೋದಿಸಿದ ನಿಯಮಾನುಸಾರ ಸೂಕ್ಷ್ಮತೆಯಿಂದ ಕಾರ್ಯ ನಿರ್ವಹಿಸಬೇಕು. ಗ್ರಾಹಕರು ಮರುಪಾವತಿ ತೊಂದರೆಯಲ್ಲಿದ್ದರೆ ಸಂಸ್ಥೆ ಅನುಮೋದಿಸಿದ ಸಾಲ ಮರುಪಾವತಿಯ ಪುನಾರಚನೆ ನಿಯಮಾವಳಿ ಅನುಸರಿಸಬೇಕು. ಜೊತೆಗೆ ಗ್ರಾಹಕರಿಂದ ಪಡೆದ ಮಾಹಿತಿಯನ್ನು ಗೌಪ್ಯವಾಗಿಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉಪಸ್ಥಿತರಿದ್ದರು. 30 ಕೆಸಿಕೆಎಂ 2

ಚಿಕ್ಕಮಗಳೂರು ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಹಾಗೂ ಎಸ್‌ಪಿ ಡಾ. ವಿಕ್ರಂ ಅಮಟೆ ನೇತೃತ್ವದಲ್ಲಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ