ಕನ್ನಡಪ್ರಭ ವಾರ್ತೆ ಮಡಿಕೇರಿ ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಇತಿಹಾಸವನ್ನು ಸೃಷ್ಟಿಸಬೇಕಾದರೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ದಲಿತ ಚಳವಳಿ ಹೋರಾಟಗಾರ ಜಯಪ್ಪ ಹಾನಗಲ್ ಅಭಿಪ್ರಾಯಪಟ್ಟಿದ್ದಾರೆ.
ದಲಿತ ಜನಾಂಗದ ಬದುಕಿನ ಇತಿಹಾಸದಲ್ಲಿ ಅಸ್ಪೃಶ್ಯತೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅದನ್ನು ಕೊನೆಗೊಳಿಸಬೇಕು ಎಂಬ ಹೋರಾಟಕ್ಕೆ ಇಳಿದ ಮೊಟ್ಟ ಮೊದಲ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಅಸಮಾನತೆ, ಮೇಲು-ಕೀಳು ಮಾನವ ನಿರ್ಮಿತವಲ್ಲ. ಅದರಿಂದ ದಲಿತರಿಗೆ ಶಿಕ್ಷಣ ಕೊಡುವುದರ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ಅವರನ್ನು ಸಬಲರನ್ನಾಗಿ ಮಾಡಿದರೆ ಅವರು ಹಿಂದುಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ವಕೀಲ ಹಾಗೂ ಚಿಂತಕ ಕಾಳಿಸ್ವಾಮಿ ಸಂವಿಧಾನದ ಬಗ್ಗೆ ಪ್ರಮುಖ ಮಾಹಿತಿ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭಾರತಕ್ಕೊಂದು ಸುಭದ್ರ ಸಂವಿಧಾನ ನೀಡಿದ್ದು, ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವುದು ಅವರ ಕೊಡುಗೆಯಾಗಿದೆ ಎಂದರು.ಸಮಾಜಕ್ಕೆ ವಿದ್ಯಾವಂತರಾಗಿರಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ ಎಂಬ ಸಲಹೆಗಳ ಮೂಲಕ ಜೀವನ ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು ಎಂಬ ಅನೇಕ ವಿಚಾರಗಳನ್ನು ದೇಶಕ್ಕಾಗಿ ನೀಡಿದರು. ಮಹಿಳಾ ಹಕ್ಕುಗಳನ್ನು ನೀಡಿದ ಮಹಾನ್ ವಿದ್ವಾಂಸರು ಎಂದು ಬಣ್ಣಿಸಿದರು.
ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಚಳವಳಿಗಳನ್ನು ಆರಂಭಿಸಿದ ಪ್ರೊ. ಬಿ.ಕೃಷ್ಣಪ್ಪ ದಲಿತರಿಗಾಗಿ ಹಲವಾರು ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಶ್ರಮವಹಿಸಿದ್ದರು. ದೇವದಾಸಿ ಪದ್ಧತಿ, ಜೀತ ಪದ್ಧತಿ, ಜಾತಿ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ದಲಿತ ಸಂಘಟನೆಯನ್ನು ಸ್ಥಾಪಿಸಿ, ಹೋರಾಟಗಳ ಮೂಲಕ ದಲಿತರನ್ನು ಜಾಗೃತಿ ಮೂಡಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ, ಪ್ರೊಫೆಸರ್ ಹುದ್ದೆಯಲ್ಲಿ ಇದ್ದುಕೊಂಡೆ ಹೊರಟಗಳನ್ನು ಮಾಡುತ್ತಾ ಹೆಸರಾದವರು, ಇವರ ಸಿದ್ಧಾಂತಗಳನ್ನು ಅನುಸರಿಸಲು ಕರೆ ನೀಡಿದರು.
ಜಿಲ್ಲಾ ಸಂಘಟನಾ ಸಂಚಾಲಕ ಬಾವಾ ಮಾಲ್ದಾರೆ ಮಾತನಾಡಿ, ಭಾರತದ ಸಂವಿಧಾನ ಪೀಠಿಕೆ ಓದಿ ಅರ್ಥೈಸಲು ತಿಳಿಸಿದರು.ದಲಿತ ಚಳುವಳಿಯ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕ ಜಯಪ್ಪ ಹಾನಗಲ್ ಹಾಗೂ ವಕೀಲರು ಹಾಗೂ ಚಿಂತಕ ಕಾಳಿಸ್ವಾಮಿ ಅವರನ್ನು ಜಿಲ್ಲಾ ಸಮಿತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಜಿಲ್ಲಾ ಖಜಾಂಚಿ ರಾಮಚಂದ್ರ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿ ಪುನರ್ ರಚನೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರಾಗಿ ಬಸವಣ್ಣ ವಚನಕಾರರಾದ ಕರಿಯಯ್ಯ ಬ್ಯಾಡಗೊಟ್ಟ, ಬಾವಾ ಮಾಲ್ದಾರೆ, ಎಂ.ಚಿರಂಜೀವಿ ಕುಶಾಲನಗರ, ಬೋಜ ವಿರಾಜಪೇಟೆ, ಅಯ್ಯಪ್ಪ ಪೊನ್ನಂಪೇಟೆ, ಮನೋಜ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾಗಿ ಕುಳಿಯ ವಿರಾಜಪೇಟೆ, ಮಡಿಕೇರಿ ತಾಲೂಕು ಸಮಿತಿ ಸಂಚಾಲಕಿ ಗೌರಮ್ಮ ಅವರನ್ನು ನೇಮಿಸಲಾಯಿತು.