ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬ್ರಿಟಿಷರ ವಿರುದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಕೊಡುಗೆ ಅಪಾರವಾಗಿದೆ ಎಂದು ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಹೇಳಿದರು.ನಗರದ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ ಹೋರಾಟದಲ್ಲಿ ರಾಣಿ ಚೆನ್ನಮ್ಮಳ ಪಾತ್ರ ಪ್ರಮುಖವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಚಿಕ್ಕವಯಸ್ಸಿನಲ್ಲಿಯೇ ಹೋರಾಟ ಮಾಡಿದ ಧೀರ ಮಹಿಳೆಯಾಗಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಯುವ ಪೀಳಿಗೆಗೂ ತಿಳಿಯಬೇಕು. ವಿದ್ಯಾರ್ಥಿಗಳು ಚೆನ್ನಮ್ಮ ಅವರ ಸಾಹಸ, ದೇಶಾಭಿಮಾನವನ್ನು ಅಳವಡಿಸಿಕೊಂಡು ಮಾದರಿಯನ್ನಾಗಿಸಿಕೊಳ್ಳಬೇಕು ಎಂದರು.ನಗರದ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ ಮಾತನಾಡಿ ಚೆನ್ನಮ್ಮ ಅವರು ಕನ್ನಡ ನಾಡು ಕಂಡ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿಯಾಗಿದ್ದಾರೆ. ಚೆನ್ನಮ್ಮ ಅವರ ಧೈರ್ಯ, ಶೌರ್ಯ, ಸಾಹಸಗಾಥೆ ಇಂದಿಗೂ ಅವೀಸ್ಮರಣೀಯವಾಗಿವೆ. ಅದರಲ್ಲೂ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರಲಿಲ್ಲ. ಎಲ್ಲಾ ಭಾರತೀಯರು ಗೌರವದಿಂದ ಬದುಕಲು ಅನುವು ಮಾಡಿಕೊಟ್ಟರು. ಹೋರಾಟದ ಕಿಚ್ಚನ್ನು ಜನರಿಗೆ ತುಂಬಿದರು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸಾಧನೆಯನ್ನು ಇಂದಿನ ಯುವ ಪೀಳೆಗೆಗೆ ತಿಳಿಸಬೇಕು. ಯುವಕ, ಯುವತಿಯರು ಚೆನ್ನಮ್ಮನವರ ಅದರ್ಶಗುಣಗಳನ್ನು ಅಳವಡಿಸಿಕೊಳ್ಳಬೇಕು. ಶಾಲಾ ಕಾಲೇಜು ಮಕ್ಕಳಲ್ಲಿ ಚೆನ್ನಮ್ಮನವರ ನಾಡು, ನುಡಿಯ ಬಗ್ಗೆ ಅಭಿಮಾನ ತುಂಬಬೇಕು. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವಂತೆ ಸಲಹೆ ಮಾಡಿದರು.ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆ ಸದಸ್ಯರು ಗೀತಗಾಯನ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಜನಪದ ಗಾಯಕರಾದ ಸಿ.ಎಂ. ನರಸಿಂಹ ಮೂರ್ತಿ, ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಕೆ.ವೀರಭದ್ರಸ್ವಾಮಿ, ಮಂಜೇಶ, ಶಿವಪ್ರಸಾದ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.