ಕನ್ನಡಪ್ರಭ ವಾರ್ತೆ ಹಾವೇರಿ
ಎಲ್ಲರೂ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಹಾಗೂ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಡಿವೈಎಸ್‌ಪಿ ಎಂ.ಎಸ್. ಪಾಟೀಲ ಹೇಳಿದರು.ವಾಕರಸಾ ಸಂಸ್ಥೆ ಹಾವೇರಿ ವಿಭಾಗೀಯ ಕಚೇರಿಯಲ್ಲಿ ಜರುಗಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಮ್ಮ ವಾಹನಗಳ ವಿಮೆ ಕಡ್ಡಾಯವಾಗಿ ಮಾಡಿಸಬೇಕು ಹಾಗೂ ವಾಹನ ಚಾಲನಾ ಸಮಯದಲ್ಲಿ ಮದ್ಯಪಾನ ಮಾಡಬಾರದು. ದ್ವಿಚಕ್ರ ವಾಹನ ಸವಾರರು ಚಾಲನಾ ಸಮಯದಲ್ಲಿ ಹೆಲ್ಮೆಟ್ ಧರಿಸಬೇಕು ಹಾಗೂ ಮೊಬೈಲ್ ಉಪಯೋಗಿಸಬಾರದು. ತಮ್ಮ ಜೀವದ ಕಾಳಜಿ ಇರಬೇಕು ಎಂದು ಹೇಳಿದರು.ಪ್ರಾದೇಶಿಕ ಸಾರಿಗೆ ಅಧಿಕಾರಿ ವಾಸಿಂಬಾಬು ಮುದ್ದೇಬಿಹಾಳ ಮಾತನಾಡಿ, ವಾಹನ ಚಾಲನೆಯ ಸಮಯದಲ್ಲಿ ಸೀಟ್ ಬೇಲ್ಟ್ ಕಡ್ಡಾಯವಾಗಿ ಧರಿಸಬೇಕು ಹಾಗೂ ಎಷ್ಟೇ ತುರ್ತು ಕೆಲಸಗಳಿದ್ದರೂ ಸಹ ವಾಹನವನ್ನು ನಿಧಾನವಾಗಿ ಚಾಲನೆ ಮಾಡಬೇಕು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿದಲ್ಲಿ ಶೇ. 50ರಷ್ಟು ಮರಣ ತಪ್ಪಿಸಬಹುದು ಎಂದರು.
ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಮಾತನಾಡಿ, ಪ್ರತಿ ವರ್ಷ ಅಪಘಾತದಿಂದಲೇ ಸುಮಾರು 1.5 ಲಕ್ಷ ಜನ ಮರಣ ಹೊಂದುತ್ತಾರೆ. ಸಂಸ್ಥೆಯ ಚಾಲಕರು ದಿನನಿತ್ಯದ ಕರ್ತವ್ಯದಲ್ಲಿ ಶಿಸ್ತು ಹಾಗೂ ಸಂಯಮದಿಂದ ವಾಹನ ಚಾಲನೆ ಮಾಡಬೇಕು. ಅಪಘಾತ ರಹಿತ ಸೇವೆ ಸಲ್ಲಿಸುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಸಲ್ಲಿಸುವುದು ನಮ್ಮ ಆದ್ಯತೆಯಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಕುಂಬಾರ ಮಾತನಾಡಿ, ಪ್ರತಿ ವರ್ಷ ಮೊದಲ ತಿಂಗಳಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಆಯೋಜನೆ ಮಾಡಿ ವರ್ಷವಿಡಿ ಅಪಘಾತಗಳು ಸಂಭವಿಸದಂತೆ ಕ್ರಮ ವಹಿಸಲು ತಿಳುವಳಿಕೆ ನೀಡಲಾಗುತ್ತದೆ. ಜೊತೆಗ ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿ ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಿ ಬೆಳ್ಳಿ ಮತ್ತು ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯುವತ್ತ ಆಸಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕು. ಚಾಲಕರು ಅಪಘಾತ ರಹಿತ ಸೇವೆ ಮೂಲಕ ಇನ್ನೂ ಹೆಚ್ಚು ಜನಸ್ನೇಹಿ ಆಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ತಾಂತ್ರಿಕ ಅಭಿಯಂತರ ಅಶೋಕ ಡೆಂಗಿ, ಕೃಷ್ಣಾ ರಾಮಣ್ಣವರ, ಸುಪ್ರೀತ್ ಬೂದಿ, ಗೀತಾ ಸರ್ವದೆ, ಕುಮಾರ, ಗಣೇಶ ಮತ್ತು ವಿಭಾಗದ ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಘಟಕ ವ್ಯವಸ್ಥಾಪಕರು ಹಾವೇರಿ ಮತ್ತು ವಿಭಾಗೀಯ ಭದ್ರತಾ ಅಧೀಕ್ಷಕರು, ಘಟಕ ವ್ಯವಸ್ಥಾಪಕರು, ಅನೇಕ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿ ಇದ್ದರು.ಎಚ್.ಎಚ್. ಚೌಡಕಿ ಸ್ವಾಗತಿಸಿದರು, ಸಿಬ್ಬಂದಿ ಮೇಲ್ವಿಚಾರಕ ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿ, ಸಂಚಾರ ನಿರೀಕ್ಷಕ ನದಾಫ್ ವಂದಿಸಿದರು.