ಹಿರಿಯೂರು: ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುತ್ತ, ರಸ್ತೆಯಲ್ಲಿ ವಾಹನಗಳನ್ನು ನಿಧಾನವಾಗಿ, ಜಾಗರೂಕತೆಯಿಂದ ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಜಾತ ಸುವರ್ಣ ಹೇಳಿದರು.
ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿಸುವ ಮೂಲಕ ವಾಹನ ಚಾಲನೆ ಮಾಡಬೇಕು. ಸಿಗ್ನಲ್‌ಗಳು, ರಸ್ತೆ ಗುರುತುಗಳು ಮತ್ತು ವೇಗ ಮಿತಿಯನ್ನು ಗಮನಿಸಬೇಕು. ಪಾದಚಾರಿಗಳು ಮತ್ತು ಇತರ ವಾಹನಗಳಿಗೆ ತೊಂದರೆ ಆಗದಂತೆ, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿಯಮಗಳನ್ನು ಪಾಲಿಸದೆ ಅಜಾಗರೂಕವಾಗಿ ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸಿ ಗಾಯಗಳು ಅಥವಾ ಜೀವಹಾನಿ ಆಗಬಹುದು. ಜೊತೆಗೆ ವಾಹನಗಳಿಗೆ ಹಾನಿ, ದಂಡ ಹಾಗೂ ಕಾನೂನು ಸಮಸ್ಯೆಗಳು ಎದುರಾಗುತ್ತವೆ ಎಂದು ಎಚ್ಚರಿಕೆ ನೀಡಿದರು.ವಿದ್ಯಾರ್ಥಿಗಳು ಕಾನೂನುಬದ್ಧ ವಯಸ್ಸು ತಲುಪಿದ ನಂತರವೇ ವಾಹನ ಚಾಲನೆ ಪ್ರಾರಂಭಿಸಬೇಕು. ಸಾಮಾನ್ಯವಾಗಿ 16 ವರ್ಷ ತುಂಬಿದವರು ಗೇರ್ ಇಲ್ಲದ ದ್ವಿಚಕ್ರ ವಾಹನವನ್ನು ಮತ್ತು 18 ವರ್ಷ ತುಂಬಿದವರು ಎಲ್ಲಾ ವಾಹನಗಳನ್ನು ಚಾಲನೆ ಮಾಡಬಹುದು. ಈ ವಯಸ್ಸು ತಲುಪಿದ ನಂತರ ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ಮೊದಲು ಲರ್ನರ್ ಲೈಸೆನ್ಸ್ ಪಡೆದು ಚಾಲನಾ ಪರೀಕ್ಷೆ ಉತ್ತೀರ್ಣರಾದ ಮೇಲೆ ಶಾಶ್ವತ ಚಾಲನಾ ಪರವಾನಗಿ ಪಡೆಯಬೇಕು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್.ಡಿ.ಶ್ರೀಧರ್ ಮಾತನಾಡಿ, ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜೀವನಕ್ಕೆ ಬಹಳ ಮುಖ್ಯ. ರಸ್ತೆ ಅಪಘಾತಗಳು ಅಜಾಗರೂಕ ಚಾಲನೆ, ಅತಿವೇಗ, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಗಮನ ತಪ್ಪುವುದರಿಂದ ಅಪಘಾತ ಸಂಭವಿಸುತ್ತವೆ. ಇಂತಹ ಅಪಘಾತಗಳು ಕೆಲವೊಮ್ಮೆ ಗಂಭೀರ ಗಾಯಗಳಿಗೆ ಕಾರಣವಾಗುತ್ತವೆ ಮತ್ತು ಕೆಲ ಸಂದರ್ಭಗಳಲ್ಲಿ ಜೀವನ್ಮರಣದ ಪ್ರಶ್ನೆಯಾಗುತ್ತದೆ. ಒಂದು ಸಣ್ಣ ತಪ್ಪು ಕೂಡ ಒಂದು ಅಮೂಲ್ಯ ಜೀವವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಇದನ್ನು ತಡೆಯಲು ವಿದ್ಯಾರ್ಥಿಗಳು ಬಾಲ್ಯದಿಂದಲೇ ರಸ್ತೆ ಸುರಕ್ಷತಾ, ನಿಯಮಗಳನ್ನು ಕಲಿಯಬೇಕು ಮತ್ತು ಪಾಲಿಸಬೇಕು. ರಸ್ತೆ ದಾಟುವಾಗ ಜೀಬ್ರಾ ಕ್ರಾಸ್ ಬಳಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಬಸವರಾಜಪ್ಪ, ಕಾರ್ಯದರ್ಶಿ ಎಚ್.ಎಂ.ಬಸವರಾಜ್, ನಿರ್ದೇಶಕರಾದ ಕೆ.ಆರ್.ವೀರಭದ್ರಯ್ಯ, ಭರತ್ ಎಂ.ಕಾಳೆಸಿಂಗೆ, ಮಹಂತೇಶ್, ಎಂ.ಆರ್.ರಂಗಸ್ವಾಮಿ, ಸೋಮ.ಕೆ.ಆರ್, ಶೇಷಾದ್ರಿ, ಮುಖ್ಯ ಶಿಕ್ಷಕ ಜಿ.ತಿಪ್ಪೇಸ್ವಾಮಿ, ಹಿರಿಯ ಶಿಕ್ಷಕಿ ಪದ್ಮಜಾ ಹಾಗೂ ಶಾಲೆಯ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಜರಿದ್ದರು.