ಕನ್ನಡಪ್ರಭ ವಾರ್ತೆ ಯಾದಗಿರಿ
ಕಾನೂನುಗಳು ರೂಪಿಸುವುದು ಮತ್ತು ಜಾರಿಗೊಳಿಸುವುದು ಜನರ ಹಿತಕ್ಕಾಗಿಯೇ ಎಂಬುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು, ಈ ನಿಟ್ಟಿನಲ್ಲಿ ವಾಹನ ಸವಾರರ ಜೀವಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದಲೇ ಮಾಡಿರುವ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಕಾನೂನಿಗೆ ಗೌರವ ನೀಡಿ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಿ ಎಂದು ಮರುಳಸಿದ್ದಾರಾಧ್ಯ ಹೇಳಿದರು.ಸೆ. 23 ರಿಂದ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ನ್ಯಾಯಾಧೀಶರು ಸಂತಸ ವ್ಯಕ್ತಪಡಿಸಿದರು.ಎಸ್‌ಪಿ ಪೃಥ್ವಿಕ್ ಶಂಕರ್ ಮಾತನಾಡಿ, ವಾಹನಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಸೀಟ್ ಬೆಲ್ಟ್ ಹಾಕಿಕೊಂಡೆ ಚಲಾಯಿಸಬೇಕು. ವಾಹನಗಳ ಅಗತ್ಯ ದಾಖಲೆಗಳು ಹೊಂದಿರಲೇಬೇಕು. ಪೊಲೀಸರು ಹಿಡಿದಾಗ ದಂಡ ಕಟ್ಟಿದರಾಯಿತು ಎಂಬ ಮನೋಭಾವನೆಯಿಂದ ಸಾರ್ವಜನಿಕರು ಹೊರಬರಬೇಕು ಎಂದರು.ಜನರ ಸುರಕ್ಷತೆ ದೃಷ್ಟಿಯಿಂದ ಕಾನೂನಿನ ನಿಯಮಗಳು ಕಠಿಣವಾಗಿ ರೂಪಿಸಲಾಗಿದೆ. ಆದರೂ ಜನರು ಇದನ್ನು ಅರ್ಥ ಮಾಡಿಕೊಳ್ಳದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ವಾಹನಗಳನ್ನು ಚಲಾಯಿಸುತ್ತಾರೆ. ಇದರಿಂದ ಜೀವಕ್ಕೂ ಮತ್ತು ಅವರವರ ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ ಎಂಬುವುದು ಅರ್ಥವೇ ಮಾಡಿಕೊಳ್ಳುವುದಿಲ್ಲ ಎಂದು ವಿಷಾದಿಸಿದರು.ಅಭಿಯಾನದ ಉಸ್ತುವಾರಿಗಳಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಹೆಚ್ಚುವರಿ ಎಸ್ಪಿ ಧರಣೇಶ, ಜಿಲ್ಲಾ ಹೋಂಗಾರ್ಡ್ ಕಮಾಂಡರ್ ಈರಣ್ಣ, ಡಿವೈಎಸ್‌ಪಿಗಳಾದ ಭರತ್ ಕುಮಾರ್ ತಳವಾರ್, ಸುರೇಶ ನಾಯಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್, ಮಲ್ಲಿಕಾರ್ಜುನ ಶಿರಗೋಳ, ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು. ಜಿಲ್ಲಾ ಪೊಲೀಸ್ ಭವನದಿಂದ ಮೈಲಾಪುರ ಅಗಸಿವರೆಗೂ ಅಭಿಯಾನದ ಪಾದಯಾತ್ರೆ ನಡೆಯಿತು.