ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸಿ ಮಾನವ ಸಂಪನ್ಮೂಲವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಇನ್ಸ್‌ಪೆಕ್ಟರ್ ಎಂ.ರವಿಕುಮಾರ್ ತಿಳಿಸಿದರು.ಪಟ್ಟಣದ ಪುರ ಪೊಲೀಸ್ ಠಾಣೆ ಆವರಣದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಡೆದ ಜಾಗೃತಿ ಆಟೋ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪಘಾತ ಘಟನೆಗಳಿಂದ ಯುವಕರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಮುಂದಿನ ದೇಶದ ಭವಿಷ್ಯದ ನಾಯಕರಾಗಬೇಕಿದ್ದವರು ಜೀವನವನ್ನೇ ಕೊನೆಯಾಗಿಸುತ್ತಿದ್ದಾರೆ. ಅಘಪಾತ ತಪ್ಪಿಸಿ ಯುವ ಸಮೂಹವನ್ನು ರಕ್ಷಿಸುವ ಹೊಣೆಗಾರಿಗೆ ನಮ್ಮದಾಗಿದೆ ಎಂದರು.
ಪ್ರತಿಯೊಬ್ಬ ಪ್ರಯಾಣಿಕರು ಚಾಲನಾ ಪರವಾನಗಿ ಪಡೆದಿರಬೇಕು. ವಾಹನಗಳಿಗೆ ವಿಮೆ, 18 ವರ್ಷ ಒಳಪಟ್ಟ ಮಕ್ಕಳಿಗೆ ವಾಹನಗಳನ್ನು ನೀಡಬಾರದು, ಕುಡಿದು ವಾಹನ ಓಡಿಸಬಾರದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಅಪಘಾತದಿಂದ ಪರಾಗಬೇಕು ಎಂದರು.ಯಾವುದೇ ಪ್ರಕೃತಿ ವಿಕೋಪದಲ್ಲಿ ಸಂಭವಿಸಿದಷ್ಟು ಸಾವು ನೋವುಗಳು ಅಪಘಾತಗಳಿಂದ ಸಂಭವಿಸುತ್ತಿವೆ. ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಈ ಮಾರಣ ಹೋಮವನ್ನು ತಪ್ಪಿಸಿಕೊಳ್ಳಬಹುದು. ಇದರ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ತಿಳಿವಳಿಕೆ ನೀಡಿದರು.
ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅಪರಾಧ ಪ್ರಕರಣಗಳನ್ನು ಪೊಲೀಸರೊಬ್ಬರಿಂದಲೇ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಪೊಲೀಸರ ಜೊತೆ ವಿದ್ಯಾರ್ಥಿಗಳು, ಸಾರ್ವಜನಿಕರು ಕೈ ಜೋಡಿಸಿದಾಗ ಕೆಲವು ಅಪರಾಧ ನಿಯಂತ್ರಿಸಲು ಸಾಧ್ಯ ಎಂದರು.ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ರಸ್ತೆ ದಾಟುವಾಗ, ಬರುವಾಗ, ಬಸ್ ಹತ್ತುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಒಂದು ಕ್ಷಣದಲ್ಲಿ ಆಗುವ ಅಪಘಾತಗಳು ಜೀವನವನ್ನೇ ಬಲಿ ತೆಗೆದುಕೊಳ್ಳುತ್ತವೆ ಎಂದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೂರಾರು ಆಟೋಗಳ ಮೂಲಕ ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಈ ವೇಳೆ ಎಎಸ್‌ಐ ರಮೇಶ್, ಸುರೇಶ್ ಸಿಬ್ಬಂದಿ ಪ್ರಕಾಶ್, ಮಾದೇಶ್, ಪ್ರೇಮ್‌ಕುಮಾರ್, ಮನೋಜ್, ರಾಜಣ್ಣ, ಮತ್ತಿತಾಳೇಶ್ವರ ಆಟೋ ಸಂಘದ ಮುತ್ತು, ಶಿವರಾಜ್, ಜಯರಾಮು ಸೇರಿದಂತೆ ಇತರರು ಇದ್ದರು.