ಕನ್ನಡಪ್ರಭ ವಾರ್ತೆ ಹಾಸನ
ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಿ ಸಂಚಾರಿ ನಿಯಮಗಳನ್ನು ಪಾಲಿಸಿದರೆ ರಸ್ತೆ ಅಪಘಾತಗಳಿಂದ ದೂರವಿರಬಹುದು. ಅಪಘಾತಗಳಿಂದ ಉದ್ಭವಿಸುವ ಪ್ರಾಣಪಾಯವನ್ನು ತಡೆಗಟ್ಟಬಹುದು. ಯಾರೂ ಕೂಡ ಚಾಲನಾ ಪರವಾನಗಿ ಇಲ್ಲದೆ, ಧೂಮಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂದು ಆರ್‌ಟಿಒ ಇನ್ಸ್‌ಪೆಕ್ಟರ್ ಯಶ್ವಂತ್ ಸಲಹೆ ನೀಡಿದರು..ರೋಟರಿ ಕ್ಲಬ್ ಆಫ್ ಹಾಸನ, ಮಿಡ್ ಟೌನ್ ಹಾಸನ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಶ್ರೀ ಬಸವರಾಜೇಂದ್ರ ಆಂಗ್ಲ ಮಾಧ್ಯಮ ಶಾಲೆ, ರೋಟರಿ ಸಮುದಾಯ ದಳ- ಸ್ಪರ್ಶ, ಸಮುದಾಯ ಆಧಾರಿತ ರೋಟರಾಕ್ಟ್ ಕ್ಲಬ್ ಸೇವಾ ಹಾಸನ ಮತ್ತು ಶಕ್ತಿ ಟೊಯೆಟೋ ಶೋ ರೂಂ ಸಹಭಾಗಿತ್ವದಲ್ಲಿ ನಗರದ ಹೇಮಾವತಿ ಪ್ರತಿಮೆಯಿಂದ ತಾಲೂಕು ಪಂಚಾಯಿತಿ ಮುಂಭಾಗದವರೆಗೆ ಏರ್ಪಡಿಸಿದ್ದ ಸಂಚಾರಿ ನಿಯಮ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿ, ವಾಹನ ಚಾಲನೆ ಮಾಡುವಾಗ ಎಲ್ಲಾ ನಿಯಮವನ್ನು ಪಾಲಿಸಿದರೆ ಅಪಘಾತದಿಂದ ದೂರ ಇರಬಹುದು ಎಂದರು.
ಕಾರ್ಯಕ್ರಮದಲ್ಲಿ ಹಾಸನ ನಗರದ ಶ್ರೀ ಬಸವರಾಜೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಎ. ಚಂದ್ರಮೌಳಿ ಮಾತನಾಡಿ, ಚಿಕ್ಕಮಕ್ಕಳಿಗೆ ಪೋಷಕರು ಕಡ್ಡಾಯವಾಗಿ ವಾಹನ ಚಲಾಯಿಸಲು ಕೊಡಬೇಡಿ. ಏಕೆಂದರೆ ವಾಹನ ಚಲಾಯಿಸಲು ಬಾರದೆ ಗಾಬರಿಯಿಂದ ಸಂಚಾರಿ ನಿಯಮಗಳಿಗೆ ವಿರುದ್ಧವಾಗಿ ವಾಹನ ಚಲಾಯಿಸಿ ಚಿಕ್ಕ ಮಕ್ಕಳು ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದು ಪೋಷಕರಿಗೆ ನಷ್ಟ, ಅಲ್ಲದೆ ಪೋಷಕರಿಗೆ ಕಾನೂನಿನ್ವಯ ಶಿಕ್ಷೆಯಾಗುತ್ತದೆ ಎಂದು ಹೇಳಿದರು.ಆರ್‌ಟಿಒ ವರಿಷ್ಠಾಧಿಕಾರಿ ಗಿರೀಶ್ ಮತ್ತು ಸಿಬ್ಬಂದಿ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್‌ನ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮದ ಕ್ಲಬ್ ಅಧ್ಯಕ್ಷ ರೊ.ನಟೇಶ್, ರೊ.ಕೆ.ಸತ್ಯನಾರಾಯಣ, ಸದಸ್ಯರು ಹಾಗೂ ರೋಟರಿ ಸಮುದಾಯದಳ-ಸ್ಪರ್ಶದ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಜಿ ಹಾಗೂ ಶಕ್ತಿ ಟೊಯೆಟೋ ಶೋ ರೂಂನ ಸಿಬ್ಬಂದಿ, ಶ್ರೀ ಬಸವರಾಜೇಂದ್ರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೧೫೦ ಕ್ಕೂ ಹೆಚ್ಚು ಜನರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಸಂಚಾರಿ ನಿಯಮ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ರೊ.ಡಾ.ತೇಜಸ್ವಿ ಸ್ವಾಗತಿಸಿದರು, ಆರ್‌ಸಿಸಿ ಮಾಜಿ ಅಧ್ಯಕ್ಷ, ಸದಸ್ಯ ಎಂ.ಎಚ್. ಯೋಗನಾಥ್ ನಿರೂಪಿಸಿದರು, ರೋಟರಿ ಮಿಡ್ ಟೌನ್ ಅಧ್ಯಕ್ಷ ರೊ.ಮಮತ ಪಾಟೀಲ್ ವಂದಿಸಿದರು.ಫೋಟೋ: ಸಂಚಾರಿ ನಿಯಮ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಜಾಥಾವನ್ನು ಆರ್‌ಟಿಒ ಇನ್‌ಸ್ಪೆಪೆಕ್ಟರ್ ಯಶ್ವಂತ್ ಉದ್ಘಾಟಿಸಿದರು.