ವೈಜ್ಞಾನಿಕ ಮನೋಭಾವ ಮೂಡಿಸುವ ವಿಜ್ಞಾನ ತೇರು

KannadaprabhaNewsNetwork |  
Published : Feb 08, 2024, 01:33 AM IST
ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ 'ವಿಜ್ಞಾನ ತೇರು' ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಮರಣಶಕ್ತಿ ಆಧರಿಸಿ ವಿದ್ಯಾರ್ಥಿಗಳ ಬುದ್ಧಿಮತ್ತೆ ಅಳೆಯಲಾಗುತ್ತದೆ. ನಾಲ್ಕು ಗೋಡೆಗಳ ನಡುವೆ ಕಲಿತ ಮಕ್ಕಳ ಸಾಧನೆ ಪ್ರತ್ಯಕ್ಷ ಪರಿಶೀಲಿಸುವ ಅವಕಾಶವನ್ನು ಶಿಕ್ಷಣ ಇಲಾಖೆ ವಿವಿಧ ಕಾರ್ಯಕ್ರಮಗಳಲ್ಲಿ ಕಲ್ಪಿಸಿದೆ.

ಯಲ್ಲಾಪುರ:

ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಮರಣಶಕ್ತಿ ಆಧರಿಸಿ ವಿದ್ಯಾರ್ಥಿಗಳ ಬುದ್ಧಿಮತ್ತೆ ಅಳೆಯಲಾಗುತ್ತದೆ. ನಾಲ್ಕು ಗೋಡೆಗಳ ನಡುವೆ ಕಲಿತ ಮಕ್ಕಳ ಸಾಧನೆ ಪ್ರತ್ಯಕ್ಷ ಪರಿಶೀಲಿಸುವ ಅವಕಾಶವನ್ನು ಶಿಕ್ಷಣ ಇಲಾಖೆ ವಿವಿಧ ಕಾರ್ಯಕ್ರಮಗಳಲ್ಲಿ ಕಲ್ಪಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಹೇಳಿದರು. ತಾಲೂಕಿನ ಉಮ್ಮಚಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಂದರಗಿ ಮತ್ತು ಉಮ್ಮಚಗಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ''''ವಿಜ್ಞಾನ ತೇರು'''' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಜ್ಞಾನ ಯುಗದಲ್ಲಿರುವ ನಮಗೆ ಮತ್ತು ನಮ್ಮ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಸಂಪೂರ್ಣ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದ್ದು, ಈ ಕಾರ್ಯಕ್ರಮ ಶಿಕ್ಷಕರ ಅರ್ಹತೆಯ ಮೌಲ್ಯಮಾಪನವೂ ಆಗಿದೆ ಎಂದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಯ ಕಿಡಿ ಹೊತ್ತಿಸುವ ಕಾರ್ಯಕ್ರಮದಲ್ಲಿ ಕಂಡುಬಂದ ಆಸಕ್ತಿ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೇ, ನಿರಂತರವಾಗಿ ಮುಂದುವರಿಯಬೇಕು ಎಂದ ಅವರು, ವಿದ್ಯಾರ್ಥಿಗಳ ಓದು, ಕೇವಲ ಪರೀಕ್ಷೆಗಾಗಿರದೇ, ಜೀವನದ ಅರಿವಿನ ಪಾಠವೂ ಆಗಿರಲಿ ಎಂದು ಆಶಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಸಂಘಟಿಸುವುದು ಕಷ್ಟಕರವಾಗಿದೆ. ಆದರೆ, ನಮ್ಮ ಪ್ರದೇಶದ ಎಲ್ಲ ಶಾಲೆಗಳ ಶಿಕ್ಷಕರು ಸಂಘಟಿತರಾಗಿ ಅತ್ಯಂತ ಉತ್ತಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯವಾಗಿದೆ ಎಂದರು.

''''ವಿಜ್ಞಾನ ತೇರು'''' ಹೆಸರಿನ ಇಲಾಖೆಯ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ತಾಲೂಕಿನ ಉಮ್ಮಚಗಿ, ಕುಂದರಗಿ, ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯ ಉಮ್ಮಚಗಿ ಮತ್ತು ಕುಂದರಗಿ ಕ್ಲಸ್ಟರಿನ ೨೦ ಶಾಲೆಗಳ ಸುಮಾರು ೧೨೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಹಾರ ವೈವಿಧ್ಯತೆ, ದ್ರವದ ಸ್ಥಿತಿ, ಸೌರವ್ಯೂಹ, ಬೆಳಕಿನ ಪ್ರತಿಫಲನ, ನೀರು ಶುದ್ಧೀಕರಣ, ಕಾಂತಗಳು, ಶಾಖದ ಪರಿಣಾಮ, ಮಳೆಕೊಯ್ಲು, ವಿದ್ಯುತ್ ಶಕ್ತಿಯ ವಿವಿಧ ಸ್ವರೂಪಗಳು, ವಾಯು ಒತ್ತಡ, ಆಮ್ಲ-ಪ್ರತ್ಯಾಮ್ಲಗಳ ಪರೀಕ್ಷೆ, ಅಂಗವ್ಯೂಹ, ಸಸ್ಯದ ಭಾಗಗಳು, ಶಕ್ತಿಯ ರೂಪ ಪರಿವರ್ತನೆ ಸೇರಿದಂತೆ ಉಮ್ಮಚಗಿ, ಭರತನಹಳ್ಳಿ, ಕುಂದರಗಿ, ಉಚಗೇರಿ, ದೊಡ್ಡಬೇಣ, ತಾರೇಹಳ್ಳಿ, ಇಳೇಹಳ್ಳಿ, ಸವಣೆ, ಹುಲ್ಲೋರಮನೆ, ಸಂಪೇಕೊಪ್ಪ, ಒನಕೇಮನೆ, ಹೆಮ್ಮಾಡಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಪ್ರತಿಭೆಯನ್ನು ಕುತೂಹಲಕರವಾಗಿ ಪ್ರತಿಬಿಂಬಿಸಿದರು. ತಮ್ಮ ಸಂಶೋಧನೆಗಳ ಕುರಿತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಸಿ.ಆರ್.ಪಿ. ವಿಷ್ಣು ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಪ್ರತಿಭಾ ವಿ. ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಎಂ.ಡಿ. ಕಾರ್ಯಕ್ರಮ ನಿರ್ವಹಿಸಿದರು. ಮುರಳೀಧರ ಶಿರಸಾಟ್ ವಂದಿಸಿದರು. ಮಂಚೀಕೇರಿಯ ಸಿ.ಆರ್.ಪಿ. ಕೆ.ಆರ್. ನಾಯ್ಕ, ಗ್ರಾ.ಪಂ. ಸದಸ್ಯರಾದ ಸರಸ್ವತಿ ಪಟಗಾರ, ತಿಮ್ಮವ್ವ ಬಸಾಪುರ, ತಾಲೂಕು ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್., ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಗೀತಾ ಪೂಜಾರಿ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!