ಧಾರವಾಡ: ವಾಹನ ಸವಾರರು ಸಂಚಾರ ನಿಯಮ ಪಾಲಿಸುವ ಮೂಲಕ ತಮ್ಮ ಜೀವದೊಂದಿಗೆ ಇತರರ ಜೀವವನ್ನು ಕಾಪಾಡಬೇಕು. ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ನಿಯಮ ಪಾಲಿಸುವುದರಿಂದ ಸುರಕ್ಷಿತ ಸಂಚಾರ ಸಾಧ್ಯ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಇದ್ದು, ವಾಹನಗಳ ದಟ್ಟಣೆ ಅಧಿಕವಾಗಿದೆ. ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ವಾಹನ ಸವಾರರು ಜಾಗರೂಕತೆಯಿಂದ ಸಂಚಾರಿ ನಿಯಮ ಪಾಲಿಸುವ ಅಗತ್ಯವಿದೆ. ಅನೇಕರು ವಿಶೇಷವಾಗಿ ಯುವಕರು ವಾಹನವನ್ನು ಸುರಕ್ಷತಾ ಕ್ರಮ ಅನುಸರಿಸದೆ ಚಲಾಯಿಸುತ್ತಾರೆ. ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಉಂಟಾಗುತ್ತವೆ ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕರು ವಾಹನ ಚಲಾಯಿಸುವಾಗ ಹೆಲ್ಮೇಟ್ ಮತ್ತು ಸಿಟ್ ಬೆಲ್ಟ್ ಧರಿಸಬೇಕು. ಈ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ ಮಾತನಾಡಿ, 25ರಿಂದ 40ರ ವಯೋಮಾನದ ಜನರು ಜಿಲ್ಲೆಯಲ್ಲಿ ಪ್ರತಿ ವರ್ಷ ಸರಿಸುಮಾರು 450 ಜನ ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಅವರನ್ನೇ ಅವಲಂಭಿಸಿದ ಹೆಂಡತಿ ಮಕ್ಕಳು ಮತ್ತು ತಂದೆ ತಾಯಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದರು.
ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಎಂ.ಪಿ., ಕೆಸಿಡಿ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಕವಿವಿ ಎನ್ ಎಸ್‌ಎಸ್ ಸಂಯೋಜಕ ಡಾ. ಎಂ.ಬಿ. ದಳಪತಿ ಸೇರಿದಂತೆ ಇತರರು ಇದ್ದರು.
ಕಾಲನಡಿಗೆ ಜಾಥಾದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಕೆಸಿಡಿ ಎನ್‌ಎಸ್‌ಎಸ್ ಸ್ವಯಂ ಸೇವಕರು, ರಾಯಾಪುರದ ಕೆಎಸ್‌ಆರ್‌ಪಿ ಬಟಾಲಿಯನ್, ಹುಬ್ಬಳ್ಳಿ-ಧಾರವಾಡ ಮೋಟಾರ ಡ್ರೈವಿಂಗ್ ಸ್ಕೂಲ್ ಅಸೋಸಿಯಷನ್, ಕವಿವಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.