ಪ್ರಮೋದ ಗಡಕರ
ಈಗ ಸಂಗ್ರಹವಾಗಿರುವ ನೀರನ್ನೇ ಮುಂದಿನ ಎಂಟು ತಿಂಗಳವರೆಗೆ ಜತನದಿಂದ ಬಳಸಬೇಕಾದ ಅನಿವಾರ್ಯತೆ ಎದುರಾಗಿದ್ದು, ನೀರಿನ ಮಿತ ಬಳಕೆಗೆ ಮಹಾನಗರ ಪಾಲಿಕೆ ಹಾಗೂ ಎಲ್ ಆ್ಯಂಡ್ ಟಿ ಕಂಪನಿ ಯೋಜನೆ ರೂಪಿಸುತ್ತಿವೆ.
ನಗರದಲ್ಲಿ ದಿನದಿಂದ ದಿನಕ್ಕೆ ನೀರು ಪೂರೈಕೆಯ ನಡುವಿನ ಅಂತರ ಹೆಚ್ಚಾಗುತ್ತಿದ್ದು, ಪೂರೈಕೆಯ ಅವಧಿಯನ್ನೂ ಕಡಿತಗೊಳಿಸಲಾಗುತ್ತಿದೆ. ಕೆಲವು ಬಡಾವಣೆಗಳಲ್ಲಿ ವಾರಗಟ್ಟಲೆ ನೀರು ಬರುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಹಬ್ಬದ ಸಂದರ್ಭದಲ್ಲೇ ನೀರಿನ ಕೊರತೆ ಎದುರಾಗಿರುವುದರಿಂದ ಜನರು ದೈನಂದಿನ ಅಗತ್ಯಗಳಿಗಾಗಿ ಬೋರ್‌ವೆಲ್ ಹಾಗೂ ಬಾವಿಗಳ ನೀರನ್ನು ಅವಲಂಬಿಸುವಂತಾಗಿದೆ. ಹಲವು ಮನೆಗಳಲ್ಲಿ ಹಳೆಯ ಬಾವಿಗಳನ್ನು ಸ್ವಚ್ಛಗೊಳಿಸಿ ಪಂಪ್ ಅಳವಡಿಸಲಾಗುತ್ತಿದೆ. ಬಾವಿ ಅಥವಾ ಬೋರ್‌ವೆಲ್ ಸೌಲಭ್ಯವಿಲ್ಲದ ಕುಟುಂಬಗಳು ಟ್ಯಾಂಕರ್ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.43 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ: ನಗರದಲ್ಲಿ ನೀರಿನ ಸಮಸ್ಯೆ ನಿರ್ವಹಿಸಲು ಎಲ್ ಆ್ಯಂಡ್ ಟಿ ಕಂಪನಿಯು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 43 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದೆ. ನಗರದ ಒಟ್ಟು 58 ವಾರ್ಡ್‌ಗಳ ಪೈಕಿ ಕೇವಲ 10 ವಾರ್ಡ್‌ಗಳಲ್ಲಿ ಮಾತ್ರ 24 ಗಂಟೆಗಳ ನೀರು ಪೂರೈಕೆ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಈ ವಾರ್ಡ್‌ಗಳಲ್ಲಿಯೂ ಇತ್ತೀಚೆಗೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಉಳಿದ 48 ವಾರ್ಡ್‌ಗಳಿಗೂ 24 ಗಂಟೆಗಳ ನೀರು ಪೂರೈಕೆ ವ್ಯವಸ್ಥೆ ವಿಸ್ತರಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಲಭ್ಯತೆ ಕುರಿತು ಆತಂಕ ಎದುರಾಗಿರುವುದು ನಗರವಾಸಿಗಳಲ್ಲಿ ಕಳವಳ ಮೂಡಿಸಿದೆ. ಮಳೆ ಕೊರತೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದ್ದು, ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗಿದೆ.ಜನರಿಗೆ ಮಿತ ಬಳಕೆಯ ಪಾಠ; ಸೋರಿಕೆ ತಡೆಗೆ ಕ್ರಮವೆಲ್ಲಿ?: ಒಂದೆಡೆ ಜನರಿಗೆ ಪೂರೈಸುವ ನೀರಿನ ಪ್ರಮಾಣ ಹಾಗೂ ಅವಧಿಯನ್ನು ಕಡಿತಗೊಳಿಸಲಾಗುತ್ತಿದ್ದರೆ, ಮತ್ತೊಂದೆಡೆ ಎಲ್ ಆ್ಯಂಡ್ ಟಿ ಕಂಪನಿಯ ಕಾಮಗಾರಿಗಳಲ್ಲಿನ ಲೋಪಗಳಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪೈಪ್‌ಲೈನ್ ಜೋಡಣೆ ಹಾಗೂ ನಲ್ಲಿ ಸಂಪರ್ಕಗಳಲ್ಲಿನ ದೋಷಗಳಿಂದ ನೀರು ಸೋರಿಕೆಯಾಗಿ ವ್ಯರ್ಥವಾಗುತ್ತಿದೆ ಎಂಬುದು ಸಾರ್ವಜನಿಕರ ಆಕ್ಷೇಪ.ನೀರಿನ ಪ್ರತಿಯೊಂದು ಹನಿಯೂ ಅಮೂಲ್ಯವಾಗಿರುವ ಇಂತಹ ಸಂದರ್ಭದಲ್ಲಿ ಸೋರಿಕೆಗೆ ಕಡಿವಾಣ ಹಾಕುವುದು ಅತ್ಯಗತ್ಯ. ಜನರಿಗೆ ಮಿತ ಬಳಕೆಯ ಬಗ್ಗೆ ಸೂಚನೆ ನೀಡುವ ಮೊದಲು ಕಂಪನಿಯು ತನ್ನ ಕಾಮಗಾರಿಗಳಲ್ಲಿನ ಲೋಪಗಳನ್ನು ಸರಿಪಡಿಸಿ, ನೀರು ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.ಸಾರ್ವಜನಿಕರ ಸಹಕಾರವೂ ಅಗತ್ಯ:ಮಳೆಯ ಕೊರತೆಯಿಂದಾಗಿ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದು ಅನಿವಾರ್ಯವಾಗಿದೆ. ಅನಗತ್ಯವಾಗಿ ನೀರು ಹರಿಸುವುದನ್ನು ತಪ್ಪಿಸುವುದು, ಸೋರಿಕೆ ಕಂಡುಬಂದ ತಕ್ಷಣ ದುರಸ್ತಿ ಮಾಡಿಸುವುದು ಹಾಗೂ ದೈನಂದಿನ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಆದರೆ, ನೀರಿನ ಮಿತ ಬಳಕೆಯ ಜವಾಬ್ದಾರಿ ಸಾರ್ವಜನಿಕರಿಗಷ್ಟೇ ಸೀಮಿತವಾಗಬಾರದು. ನೀರು ಪೂರೈಕೆ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳನ್ನು ತ್ವರಿತವಾಗಿ ಸರಿಪಡಿಸಿ, ಸೋರಿಕೆಯನ್ನು ತಡೆದು, ಎಲ್ಲ ವಾರ್ಡ್‌ಗಳಿಗೂ ಸಮರ್ಪಕವಾಗಿ ನೀರು ತಲುಪಿಸುವ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಪನಿಯೂ ನಿಭಾಯಿಸಬೇಕು. ಸಾರ್ವಜನಿಕರ ಸಹಕಾರ ಮತ್ತು ಆಡಳಿತದ ಪರಿಣಾಮಕಾರಿ ಕ್ರಮಗಳು ಒಟ್ಟಾಗಿ ಜಾರಿಯಾದಾಗ ಮಾತ್ರ ಮುಂದಿನ ತಿಂಗಳುಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವುದನ್ನು ತಡೆಯಲು ಸಾಧ್ಯ.ಮಳೆ ಕೊರತೆಯಾಗಿರುವುದರಿಂದ ಈಗ ಲಭ್ಯವಿರುವ ನೀರನ್ನೇ ಜತನದಿಂದ ಕಾಯ್ದುಕೊಳ್ಳಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ. ಯಾರೂ ನೀರನ್ನು ವ್ಯರ್ಥವಾಗಿ ಪೋಲು ಮಾಡಬಾರದು. ಕಾಮಗಾರಿಗಳ ಲೋಪದಿಂದ ನೀರು ಪೋಲಾಗದಂತೆ ಎಚ್ಚರ ವಹಿಸಲು ಸಂಬಂಧಿಸಿದವರಿಗೆ ಸೂಚಿಸಲಾಗುವುದು.। ಪ್ರೀತಿ ಕಾಮಕರ, ಮೇಯರ್ ಹಲವು ದಿನಗಳಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್ ನೀರನ್ನು ಅವಲಂಬಿಸುವಂತಾಗಿದೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸಿ, ಸಮರ್ಪಕವಾಗಿ ನೀರು ಪೂರೈಸಬೇಕು.। ಅಡಿವೇಪ್ಪ ಪಾಟೀಲ, ಸ್ಥಳೀಯ ನಿವಾಸಿ