ಕಾಲಧರ್ಮ ಅನುಸರಿಸುವುದೇ ಜೀವನ ಯಶಸ್ಸಿನ ಸೂತ್ರ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Jul 17, 2025, 12:34 AM IST
ಶ್ರೀಗಳು ಆರ್ಶೀಚನ ನೀಡುತ್ತಿರುವುದು | Kannada Prabha

ಸಾರಾಂಶ

ಕಾಲಕ್ಕೆ ವಿರುದ್ಧವಾಗಿ ನಾವು ನಡೆದರೆ ಕಾಲ ನಮ್ಮನ್ನು ಮೃತ್ಯುವಾಗಿ ಕಾಡುತ್ತದೆ.

ಗೋಕರ್ಣ: ಕಾಲಕ್ಕೆ ವಿರುದ್ಧವಾಗಿ ನಾವು ನಡೆದರೆ ಕಾಲ ನಮ್ಮನ್ನು ಮೃತ್ಯುವಾಗಿ ಕಾಡುತ್ತದೆ. ಕಾಲಧರ್ಮವನ್ನು ಅನುಸರಿಸುವುದೇ ಜೀವನದ ಯಶಸ್ಸಿನ ಗುಟ್ಟು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಶ್ರೀ ನುಡಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ''''''''ದಿನಚರಿ'''''''' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಕಾಲವನ್ನು ಅನುಸರಿಸಿ ಜೀವನದಲ್ಲಿ ಮುನ್ನಡೆಯಬೇಕು. ಕಾಲ ಒಂದು ಸೀಮೆಯನ್ನು ನಿಗದಿ ಮಾಡುತ್ತದೆ ಎನ್ನುವುದಕ್ಕೆ ನಮ್ಮ ಆಯುಷ್ಯವೇ ಸಾಕ್ಷಿ. ಅಂತೆಯೇ ಸ್ಥಳ- ವಸ್ತುಗಳಿಗೂ ಒಂದು ಮಿತಿ ಇದೆ. ಆ ಚೌಕಟ್ಟಿನೊಳಗೆ ಬದುಕು ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಪ್ರಕೃತಿ ರಾತ್ರಿಯನ್ನು ಕತ್ತಲು ಮಾಡಿದರೆ, ನಾವು ಪ್ರಖರ ದೀಪಗಳನ್ನು ಹಾಕಿಕೊಂಡು ಕೆಲಸ ಮಾಡುತ್ತೇವೆ. ಇದು ಪ್ರಕೃತಿಧರ್ಮ ಅಥವಾ ಕಾಲಧರ್ಮಕ್ಕೆ ವಿರುದ್ಧ. ಇದು ಬದುಕಿನಲ್ಲಿ ವಿಕೋಪಗಳಿಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.

ದಿನಚರ್ಯೆಯನ್ನು ಸರಿಯಾಗಿ ಪಾಲಿಸದಿರುವುದೇ ಬದುಕಿನ ವ್ಯತ್ಯಯಗಳಗೆ ಕಾರಣ. ಹನಿಗೂಡಿ ಹಳ್ಳ; ದಿನಗೂಡಿ ಜೀವನ. ಹೀಗೆ ಒಂದು ದಿನದ ಚರ್ಯೆಯನ್ನು ಬದಲಿಸಿಕೊಂಡರೆ ಇಡೀ ಬದುಕನ್ನೇ ಬದಲಾಯಿಸಿಕೊಳ್ಳಬಹುದು. ದಿನಚರಿಯನ್ನು ತಿದ್ದಿಕೊಂಡರೆ ಬದುಕನ್ನೇ ತಿದ್ದಿಕೊಳ್ಳಬಹುದು. ಸಾವಿರಾರು ಯೋಜನಗಳ ಪಯಣ ಕೂಡಾ ಆರಂಭವಾಗುವುದು ಒಂದು ಹೆಜ್ಜೆಯಿಂದ; ಅಂತೆಯೇ ಬದುಕಿನಲ್ಲೂ ಒಂದೊಂದು ದಿನ ಸರಿಪಡಿಕೊಳ್ಳಬೇಕು. ದಿನಚರ್ಯೆ ಬದಲಿಸಿಕೊಂಡರೆ ಇಡೀ ಬದುಕೇ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಆತ್ಮ ಪರಮಾತ್ಮನಲ್ಲಿ ಲೀನವಾದಾಗ ಭಗವಂತನಂತೆಯೇ ಕಾಲ, ದೇಶಗಳ ಪರಿದಿಯನ್ನು ಮೀರಲು ಸಾಧ್ಯವಾಗುತ್ತದೆ. ರಾಮಕೃಷ್ಣ ಪರಮಹಂಸ, ಶುಕಮುನಿಯಂಥವರು ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಸಾಗರ ಮಂಡಲದ ಶಿಷ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಈ ವರ್ಷದ ನವರಾತ್ರಿಯನ್ನು ಸಾಗರದ ರಾಘವೇಶ್ವರ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಶಿಷ್ಯರು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಸೇವೆಯಲ್ಲಿ ನಿವೃತ್ತಿ ಇಲ್ಲ. ಮಠದ ಪ್ರತಿಯೊಬ್ಬ ಶಿಷ್ಯ ಶ್ರೀಪೀಠಕ್ಕೆ ತನ್ನ ಕೈಲಾದ ಸೇವೆ ಸಲ್ಲಿಸಬೇಕು. ಯಾವ ಶಿಷ್ಯನೂ ಸೇವಾಶೂನ್ಯನಾಗಿ ಇರಬಾರದು ಎಂದು ಅಭಿಪ್ರಾಯಪಟ್ಟರು.

ಸಾಗರ ಮಂಡಲದ ಸಾಗರ ಪೂರ್ವ, ಪಶ್ಚಿಮ, ಕ್ಯಾಸನೂರು, ಇಕ್ಕೇರಿ ಮತ್ತು ಉಳವಿ ವಲಯಗಳ ಶಿಷ್ಯರು ಭಿಕ್ಷಾಸೇವೆ ನೆರವೇರಿಸಿದರು. ಶ್ರೀಮಾತೆ ವಿಜಯಲಕ್ಷ್ಮಿ, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಸಾಗರ ಮಂಡಲ ಅಧ್ಯಕ್ಷ ಮುರಳಿ ಗೀಜಗಾರ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ, ಸತ್ಯನಾರಾಯಣ ಶರ್ಮಾ, ಡಾ.ರವಿ ಪಾಂಡವಪುರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ