ಗದಗ: ಸತ್ಯ, ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದ ಭಗವಾನ್ ಮಹಾವೀರರ ತತ್ವ ಸಂದೇಶಗಳು ವಿಶ್ವಮಾನ್ಯತೆಯನ್ನು ಪಡೆದಿವೆ. ವಿಶ್ವಶಾಂತಿಗಾಗಿ ಮಹಾವೀರರ ಸಂದೇಶಗಳ ಪರಿಪಾಲನೆ ಅವಶ್ಯ ಎಂದು ಜೈನಮುನಿ ರಾಷ್ಟ್ರಸಂತ ಕಮಲಮುನಿ ಹೇಳಿದರು.ನಗರದ ಪಾಂಜರಪೋಳದ ಗೋಶಾಲಾ ಆವರಣದಲ್ಲಿ ಗುರುವಾರ ಜೈನ್ ಸಮಾಜದಿಂದ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾತನಾಡಿದರು.ನಾವಿಂದು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು. ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಪರಿಪಾಲಿಸಬೇಕಲ್ಲದೆ ಮಕ್ಕಳಿಗೆ ಸನ್ಮಾರ್ಗದಲ್ಲಿ ಸಾಗಲು ಪಾಲಕ ಪೋಷಕರು ಮಾರ್ಗದರ್ಶನ ಮಾಡಬೇಕಿದೆ. ಕೃಷಿ ಭೂಮಿಯನ್ನು ರಸಗೊಬ್ಬರದಿಂದ ಆಗಬಹುದಾದ ಹಾನಿಯನ್ನು ತಪ್ಪಿಸುವ ಮೂಲಕ ಹೃದಯಾಘಾತ, ಕಿಡ್ನಿ ಹಾನಿ, ಅಲ್ಪ ವಯಸ್ಸಿನಲ್ಲಿ ಸಂಭವಿಸುವ ಸಾವನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದರು.ಗೋವುಗಳನ್ನು ಸಂರಕ್ಷಿಸಿ ಪೋಷಿಸುವ ಕಾರ್ಯ ಎಂದಿಗಿಂತ ಇಂದು ಅವಶ್ಯವಿದೆ. ಗೋವು ಸಂಪತ್ತಿನಿಂದ ಆರೋಗ್ಯ ಸಂಪತ್ತು ವೃದ್ಧಿಸುವದು. ಗೋವು ರಾಷ್ಟ್ರಮಾತಾ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸುವ ಮೂಲಕ ಗೋವು ಸಂರಕ್ಷಣೆಗೆ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವದು ಅಗತ್ಯವಿದೆ ಎಂದರು.ಇನ್‌ಕಮ್ ಟ್ಯಾಕ್ಸ್ ಮಾಜಿ ಚಿಫ್ ಕಮಿಷನರ್ ತಿಲಕಚಂದ ಕುವರಜಿ ಲೋಡಾಯ ಅವರು ಮಹಾವೀರರ ಕೊಡುಗೆ ಸಾಮಾಜಿಕ ಚಿಂತನೆಗಳು ಕುರಿತು ಮಾತನಾಡಿದರು.ಜೈನ ಮುನಿಗಳಾದ ಘನಶ್ಯಾಮ್‌ಮುನಿ, ಕೌಶಲಮುನಿ, ಅಕ್ಷತ್‌ಮುನಿ, ಸಕ್ಸಮ್‌ಮುನಿಗಳು ಸಮ್ಮುಖ ವಹಿಸಿದ್ದರು. ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಪಂಕಜ್ ಬಾಫಣಾ, ವರ್ಧಮಾನ ಸ್ಥಾನಿಕವಾಸಿ ಸಂಘದ ಅಧ್ಯಕ್ಷ ರೂಪಚಂದಜೀ ಪಾಲರೇಚಾ, ಜೈನ್ ತೇರಾಪಂಥ ಸಭಾದ ಅಧ್ಯಕ್ಷ ಸುರೇಶ ಕೋಠಾರಿ, ಶ್ರೀ ಕಚ್ಚಿದಾಸ್ ಓಸ್ವಾಲ ಜೈನ್ ಸಂಘದ ಅಧ್ಯಕ್ಷ ವಿಜಯರಾಜ್ ಲೂಥಿಯಾ, ದಿಗಂಬರ ಜೈನ್ ಸಂಘದ ಅಧ್ಯಕ್ಷ ಪದ್ಮರಾಜ ಕುಲಕರ್ಣಿ, ಗುಜರಾತಿ ಸಮಾಜದ ಅಧ್ಯಕ್ಷ ಛಗನ್‌ಲಾಲ್ ಪಟೇಲ್, ವಿಷ್ಣು ಸಮಾಜದ ಉಪಾಧ್ಯಕ್ಷ ರಮೇಶ ರಾಜಪುರೋಹಿತ, ಶ್ರೀ ಮಹಾವೀರ ಗೋ ಸಮಿತಿಯ ಅಧ್ಯಕ್ಷ ಅಶೋಕ ಪೋಲಾಮುಥಾ, ಕಾರ್ಯದರ್ಶಿ ಅರವಿಂದ ಬನ್ಸಾಲಿ ಇದ್ದರು.ವಿನೋದ ಮುಥಾ ಸ್ವಾಗತಿಸಿದರು. ನಲೀನ್ ಬಾಗಮಾರ ಪರಿಚಯಿಸಿದರು. ಸಚಿನ್ ಜೈನ್ ಹಾಗೂ ನರೇಶ್ ಜೈನ್ ನಿರೂಪಿಸಿದರು. ಶ್ರವಣ ಬಾಗಮಾರ ವಂದಿಸಿದರು. ಪ್ರಸಾದ ಸೇವೆಯನ್ನು ಗೋಪಾಲ ಅಗ್ರವಾಲ ಪರಿವಾರ ವಹಿಸಿದ್ದರು.