ಕನ್ನಡಪ್ರಭ ವಾರ್ತೆ ಮೇಲುಕೋಟೆ
ವೈರಮುಡಿ ಜಾತ್ರಾ ಮಹೋತ್ಸವ ಮುಗಿಯುತ್ತಿದ್ದಂತೆ ಮೇಲುಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಮಹಾರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲುಕೋಟೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧವಿದೆ. ಇಲ್ಲಿನ ಯಾವುದೇ ನಾಗರೀಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಸರ್ಕಾರ ಮೇಲುಕೋಟೆ ಅಭಿವೃದ್ಧಿಗೆ 10ಕೋಟಿ ರು. ವಿಶೇಷ ಅನುದಾನ ನೀಡಿದೆ. ಜೊತೆಗೆ ವಿವಿಧ ಇಲಾಖೆಗಳ ಅನುದಾನ ಸಹ ಲಭ್ಯವಿದ್ದು ವ್ಯವಸ್ಥಿತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.30 ಕೋಟಿ ರು. ವೆಚ್ಚದಲ್ಲಿ ಮೇಲುಕೋಟೆ ಕಲ್ಯಾಣಿ ಮತ್ತು ಕೊಳಗಳು, ಮಂಟಪಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿತ್ತಾದರೂ ಯಾರೂ ಟೆಂಡರ್‌ನಲ್ಲಿ ಭಾಗವಹಿಸದ ಕಾರಣಕ್ಕಾಗಿ ಮೀಸಲಿಟ್ಟ ಅನುದಾನ ಸರ್ಕಾರಕ್ಕೆ ವಾಪಸ್‌ಹೋಗಿದೆ. ಇದನ್ನು ಮರಳಿ ತರುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ತಿರುಪತಿ ತಿರುಮಲ ದೇವಾಲಯದವರು ಸುಸಜ್ಜಿತ ವಸತಿಗೃಹಗಳನ್ನು ನಿರ್ಮಿಸಲು ಮುಂದೆ ಬಂದಿದ್ದಾರೆ. ಇದರ ಜೊತೆಗೆ ಹಲವು ದಾನಿಗಳು ಶೌಚಾಲಯ ಹಾಗೂ ಇತರ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಂದೆ ಬಂದಿದ್ದಾರೆ. ಮಠಾಧಿಪತಿಗಳು ಸ್ವಾಮೀಜಿಗಳು ಉದ್ಯಮಿಗಳೂ ಸಹ ಸಹಕಾರ ನೀಡುವುದಾಗಿ ತಿಲಿಸಿದ್ದಾರೆ ಎಂದರು.ತಿರುಪತಿ-ತಿರುಮಲದ ಪೆರಿಯ ಜೀಯರ್ ಸ್ವಾಮೀಜಿಯವರು ಈಗಿರುವ ಮಹಾರಥವನ್ನು ನೀಡಿದ್ದು ಈ ರಥ ಶಿಥಿಲವಾಗಿದೆ. ದೇವಾಲಯದ ಸ್ಥಾನೀಕರೊಂದಿಗೆ ತಿರುಪತಿಯಲ್ಲಿ ಸ್ವಾಮೀಜಿಯನ್ನು ಭೇಟಿಮಾಡಿ ನೂತನ ರಥ ನಿರ್ಮಾಣ ಮಾಡಿಕೊಡಲು ಕೋರಲಾಗುತ್ತದೆ. ರಥ ನಿರ್ಮಾಣಕ್ಕೆ ತಿರುಪತಿಯ ಸ್ವಾಮೀಜಿಗೇ ಪ್ರಥಮ ಆದ್ಯತೆ ನೀಡಲಾಗುತ್ತದೆ. ಇದು ಆಗದಿದ್ದರೆ ನಾವೇ ರಥ ನಿರ್ಮಾಣಕ್ಕೆ ಜುಲೈ ವೆಳೆಗೆ ಚಾಲನೆ ನೀಡಿ 2025ರ ವೈರಮುಡಿಗೆ ನೂತನ ರಥ ಸಮರ್ಪಣೆಯಾಗುವಂತೆ ಮಾಡುತ್ತೇವೆ ಎಂದರು.
ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ರಥದ ಸ್ವಚ್ಛತೆ:ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಥೋತ್ಸವದ ಅಂಗವಾಗಿ ಮಹಾರಥವನ್ನು ಪಾಂಡವಪುರ ವಿಜಯ ಪ್ರಥಮದರ್ಜೆ ಕಾಲೇಜಿನ ಎನ್.ಎಸ್.ಎಸ್ ಶಿಬಿರಾರ್ಥಿಗಳು ಸ್ವಚ್ಛಗೊಳಿಸಿದರು.