ಆಹಾರ ಆಯೋಗದಿಂದ ಹೋಟೆಲ್‌ಗಳಿಗೆ ದಿಢೀರ್ ದಾಳಿ; ಅಧ್ಯಕ್ಷ ಡಾ.ಕೃಷ್ಣರಿಂದ ಒಂದು ಹೋಟೆಲ್ ಬಂದ್, ನಾಲ್ಕು ಹೋಟೆಲ್‌ಗಳಿಗೆ ದಂಡ

KannadaprabhaNewsNetwork | Updated : May 23 2025, 11:52 PM IST
ಹೊಳಲು ವೃತ್ತದ ಗಾಯಿತ್ರಿ ಭವನ್ ಹೋಟೆಲ್‌ನಲ್ಲಿ ಬಳಸುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಇರುವುದು ಕಂಡುಬಂದು ಎರಡು ಸಾವಿರ ರು. ದಂಡ ವಿಧಿಸಿದರು.
Follow Us

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹಲವು ಹೋಟೆಲ್‌ಗಳ ಮೇಲೆ ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಶುಕ್ರವಾರ ದಿಢೀರ್ ದಾಳಿ ನಡೆಸಿ ಆಹಾರ ಪದಾರ್ಥಗಳ ಗುಣಮಟ್ಟದ ಪರಿಶೀಲನೆ ನಡೆಸಿದರು.

ಅಶುಚಿತ್ವ, ತಾಜಾತನವಿಲ್ಲದ ಮಾಂಸ, ಹುಳುಗಳಿದ್ದ ಆಹಾರ ಪದಾರ್ಥಗಳು, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್, ನಿಷೇಧಿತ ಬಣ್ಣದ ಪುಡಿಗಳ ಬಳಕೆ, ಬೂಸ್ಟ್ ಹಿಡಿದ ಮಾಂಸ, ಫ್ರೀಜರ್‌ನಲ್ಲಿ ವಾರದಿಂದ ಇಟ್ಟಿರುವ ಕೋಳಿ ಮಾಂಸ, ಕುರಿ- ಮೇಕೆ ಕಾಲುಗಳು, ಮೀನುಗಳು, ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ, ಗುಣಮಟ್ಟವಿಲ್ಲದ ಆಹಾರ ವಿತರಣೆ ಮಾಡುತ್ತಿರುವುದು ದಾಳಿ ಸಮಯದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ನಗರದ ಅಶೋಕನಗರದ ನ್ಯೂ ಗ್ರೀನ್ ಪ್ಯಾಲೇಸ್ ಹೋಟೆಲ್ ಬಂದ್ ಮಾಡಿಸಿದರು. ಸುಭಾಷ್‌ನಗರದಲ್ಲಿರುವ ಕರಾವಳಿ ಹೋಟೆಲ್ ಮತ್ತು ಪಟೇಲ್ ಹೋಟೆಲ್‌ಗಳಿಗೆ ೨೦೦೦ ರು.. ದಂಡ ವಿಧಿಸಿ ನೋಟಿಸ್ ನೀಡಿದರು.

ಯಾವುದೇ ಮುನ್ಸೂಚನೆ ನೀಡದೆ ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ್, ಆಹಾರ ಸುರಕ್ಷತಾ ಅಧಿಕಾರಿ ಡಾ.ಶಶಿ, ನಗರಸಭೆ ಆಯುಕ್ತೆ ಪಂಪಾಶ್ರೀ ಅವರೊಂದಿಗೆ ದಿಢೀರ್ ಭೇಟಿ, ಪರಿಶೀಲನೆ ನಡೆಸುವುದರೊಂದಿಗೆ ಎಂಎಸ್‌ಪಿಸಿ ಘಟಕದ ಸಿಬ್ಬಂದಿ ಹಾಗೂ ಹೋಟೆಲ್ ಮಾಲೀಕರಿಗೆ ಬಿಸಿ ಮುಟ್ಟಿಸಿದರು.

ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು:

ಆರಂಭದಲ್ಲಿ ತಾಲೂಕಿನ ಬೂದನೂರಿನಲ್ಲಿರುವ ಎಂಎಸ್‌ಪಿಸಿ ಪೌಷ್ಟಿಕ ಆಹಾರ ಮತ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ವೇಳೆ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳಾದ ಪುಷ್ಠಿ ಪೌಡರ್, ಬೆಲ್ಲ, ಮೆಣಸಿನಕಾಯಿ, ಗರ್ಭಿಣಿಯರಿಗೆ ನೀಡುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡುಬಂದಿತು.

ಆಹಾರ ಸುರಕ್ಷತಾ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಎಂಎಸ್‌ಪಿಸಿ ಘಟಕಗಳಿಗೆ ಭೇಟಿ ನೀಡಿ, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಬೇಕಿತ್ತು. ಆದರೆ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ತರಾಟೆ ತೆಗೆದುಕೊಂಡರು. ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಯಾಗಲೇಬೇಕು. ಗುಣಮಟ್ಟದಿಂದ ಕೂಡಿದ ಆಹಾರ ಪದಾರ್ಥಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಕೃತಕ ಬಣ್ಣ, ವಾರದಿಂದ ಸಂಗ್ರಹಿಸಿದ್ದ ಮಾಂಸ:

ನಂತರ ಸುಭಾಷ್ ನಗರದ ನಗರದ ನ್ಯೂ ಪಟೇಲ್ ಹೋಟೆಲ್, ಕರಾವಳಿ ಹೋಟೆಲ್‌ಗಳಿಗೆ ಭೇಟಿ ನೀಡಿದ ವೇಳೆ ಅಶುಚಿತ್ವ ತಾಂಡವವಾಡುತ್ತಿರುವುದು ಕಂಡುಬಂದಿತು. ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಸುತ್ತಿರುವುದು ಕಂಡುಬಂದಿತು. ಹೊಳಲು ವೃತ್ತದ ಗಾಯಿತ್ರಿ ಭವನ್ ಹೋಟೆಲ್‌ನಲ್ಲಿ ಬಳಸುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಇರುವುದು ಕಂಡುಬಂದು ಎರಡು ಸಾವಿರ ರು. ದಂಡ ವಿಧಿಸಿದರು. ಅಲ್ಲಿಂದ ನ್ಯೂ ಗ್ರೀನ್ ಪ್ಯಾಲೇಸ್ ಡಾಬಾಗೆ ತೆರಳಿ ಅಲ್ಲಿನ ಅವ್ಯವಸ್ಥೆ ಕಂಡು ದಿಗ್ಭ್ರಾಂತರಾಗಿ ಎರಡು ಸಾವಿರ ರು. ದಂಡ ವಿಧಿಸಿ ಹೋಟೆಲ್‌ಗೆ ಬೀಗ ಹಾಕಿಸಿದರು.

ಅಲ್ಲಿಂದ ನಗರದ ಹೊರವಲಯದಲ್ಲಿರುವ ಸೀಸನ್ ಹೋಟೆಲ್‌ಗೆ ತೆರಳಿದ ವೇಳೆ ಬೂಸ್ಟ್ ಹಿಡಿದಿರುವ ಕೋಳಿಮಾಂಸ, ಫ್ರೀಜರ್‌ನಲ್ಲಿ ಹಲವು ದಿನಗಳಿಂದ ಇಟ್ಟಿರುವ ಮೀನು, ಮಾಂಸ ಪತ್ತೆಯಾದವು. ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಹೋಟೆಲ್ ಮಾಲೀಕರನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆ ತೆಗೆದುಕೊಂಡರು. ಇಂತಹ ಕಳಪೆ ಆಹಾರವನ್ನು ನೀಡಿದರೆ ಜನರ ಆರೋಗ್ಯದ ಗತಿ ಏನಾಗಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಇಂತಹ ಅವ್ಯವಸ್ಥೆ ಮುಂದುವರಿದರೆ ಹೋಟೆಲ್ ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿದರು.

ಪರವಾನಗಿ ನವೀಕರಿಸಿಲ್ಲ:

ರಾಜ್ಯ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಭೇಟಿ ನೀಡಿದ ವೇಳೆ ಹಲವಾರು ಹೋಟೆಲ್‌ಗಳು ಪರವಾನಗಿಯನ್ನು ನವೀಕರಿಸದೇ ಇರುವುದು ಕಂಡುಬಂದಿತು. ಈ ಬಗ್ಗೆ ನಗರಸಭೆ ಆಯುಕ್ತೆ ಪಂಪಾಶ್ರೀ ಅವರನ್ನು ಅಧ್ಯಕ್ಷರು ಪ್ರಶ್ನಿಸಿದಾಗ, ಮುಂದಿನ ದಿನಗಳಲ್ಲಿ ಎಲ್ಲಾ ಹೋಟೆಲ್‌ಗಳ ಪರವಾನಗಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು. ಇಂತಹ ಕಳಪೆ ಆಹಾರ ಪೂರೈಕೆಯಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಕಾಲ ಕಾಲಕ್ಕೆ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರೆ ಇಂತಹ ಅವ್ಯವಸ್ಥೆ, ಅಸುರಕ್ಷಿತ ಆಹಾರ ಪೂರೈಕೆಯಾಗುವುದನ್ನು ತಡೆಯಬಹುದಿತ್ತು. ನಗರಸಭೆ ಅಧಿಕಾರಿಗಳು ಈ ವಿಷಯದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಹೋಟೆಲ್‌ಗಳ ಮೇಲಿನ ದಿಢೀರ್ ದಾಳಿಗಳು ಇಲ್ಲಿಗೇ ನಿಲ್ಲುವುದಿಲ್ಲ. ಇನ್ಮುಂದೆ ದಾಳಿ ನಿರಂತರವಾಗಿರುತ್ತದೆ. ದುಡ್ಡು ಕೊಟ್ಟು ಊಟ ಮಾಡುವ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವುದು ಹೋಟೆಲ್ ಮಾಲೀಕರ ಕರ್ತವ್ಯ. ಇದರ ಬಗ್ಗೆ ನಗರಸಭೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲಿಸಬೇಕು. ಈಗ ಹೋಟೆಲ್‌ಗಳಿಗೆ ದಂಡ ಹಾಕಿ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದೇವೆ. ಮತ್ತೆ ಅವ್ಯವಸ್ಥೆ, ಕಳಪೆ ಗುಣಮಟ್ಟದ ಆಹಾರ ಪೂರೈಸಿದರೆ ಬಂದ್ ಮಾಡಿಸುತ್ತೇನೆ.’

- ಡಾ.ಎಚ್.ಕೃಷ್ಣ, ರಾಜ್ಯ ಆಹಾರ ಆಯೋಗದ ಅಧ್ಯಕ್ಷ