ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮಾನವೀಯ ಮೌಲ್ಯಗಳಿಂದಲೇ ಜನಪದ ಸಾಹಿತ್ಯ ಜೀವಂತವಾಗಿದೆ ಎಂದು ಕೊಡಗು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ.ಮುರಳೀಧರ್ ಹೇಳಿದರು.ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಸಭಾಂಗಣದಲ್ಲಿ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ‘ಜನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ಕುರಿತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೊಡಗಿನ ಪರಿಸರದಲ್ಲಿ ಜನಪದ ಕಲೆಗಳು, ಕಲಾವಿದರು, ಜನಪದ ಪ್ರಕಾರಗಳು, ಜನಪದ ಹಿನ್ನೆಲೆಯನ್ನೊಳಗೊಂಡಿರುವ ಹಲವಾರು ಕ್ಷೇತ್ರಗಳು, ಮಾಸ್ತಿಗಲ್ಲು, ವೀರಗಲ್ಲುಗಳು, ಜೈನ ಬಸದಿಗಳು, ಸುಗ್ಗಿಕಟ್ಟೆಗಳು, ಸುಗ್ಗಿಕುಣಿತ ಸೇರಿದಂತೆ ಹತ್ತು ಹಲವು ಪ್ರಕಾರಗಳನ್ನು ಕಾಣಬಹುದಾಗಿದೆ. ಇದರೊಂದಿಗೆ ಜನಪದ ಕಲೆಗಳನ್ನು ಉಳಿಸಿ ಬೆಳೆಸಲು ಯುವ ಪ್ರತಿಭೆಗಳು ಮುಂದಾಗಬೇಕಾಗಿದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಯೋಗೇಂದ್ರ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಹೆಣ್ಣು ಮಕ್ಕಳ ನೋವು-ನಲಿವುಗಳಿಗೆ, ಕಷ್ಟ-ಸುಖಗಳಿಗೆ ಹೆಚ್ಚಿನ ಪ್ರಾಸಸ್ತ್ಯ ನೀಡಲಾಗಿದೆ. ಹೆಣ್ಣಿನ ಬವಣೆ, ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಜಗ್ಗದೇ ಕುಟುಂಬದ ಜವಾಬ್ದಾರಿಯನ್ನು ಮುನ್ನಡೆಸಿಕೊಂಡು ಹೋಗುವುದು ಸಾಧನೆಯೇ ಸರಿ ಎಂದು ಜನಪದ ಹಾಡಿನ ಮೂಲಕ ಮನಮುಟ್ಟುವಂತೆ ವರ್ಣಿಸಿದರು.ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಅಧಿಕಾರಿ ಶಿವಮೂರ್ತಿ, ಬಿಟಿಸಿಜಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಹುಚ್ಚೇಗೌಡ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಅಧ್ಯಕ್ಷ ಟಿ.ಜಿ.ಪ್ರೇಮ್ ಕುಮಾರ್ ಇದ್ದರು. ಕಾರ್ಯಕ್ರಮದಲ್ಲಿ ಡಾ.ಯೋಗೇಂದ್ರ ಹಾಗೂ ಮುರಳೀಧರ್ ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟರು.ಕಾರ್ಯಕ್ರಮದಲ್ಲಿ ಕೊಡಗು ವಿವಿ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಖಾನ್ ನಿರೂಪಿಸಿದರು. ಬಿಟಿಸಿಜಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಶಿಬಿರಾರ್ಥಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು.