ಎಸ್ಸೆಸ್ಸೆಲ್ಸಿ: 25 ಮಂದಿ ಫೇಲ್, ಮರು ಮೌಲ್ಯಮಾಪನದಲ್ಲಿ ಪಾಸ್!

KannadaprabhaNewsNetwork | Updated : May 23 2025, 11:50 PM IST
ತಾಲೂಕಿನಲ್ಲಿ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮವಾಗಿ ಪ್ರಕಟಗೊಂಡ ಫಲಿತಾಂಶಗಳಲ್ಲಿ ಪಾಸ್ ಆಗಬೇಕಿದ್ದ ಕೆಲ ಶಾಲೆಗಳ ವಿದ್ಯಾರ್ಥಿಗಳು ಫೇಲ್ ಆಗಿದ್ದರು. ಆದರೆ, ಮರುಮೌಲ್ಯಮಾಪನ ನಡೆದ ಹಿನ್ನೆಲೆ ಈಗ ಅಚ್ಚರಿಯ ಬೆಳವಣಿಗೆ ನಡೆದಿದೆ. ಅಲ್ಲದೇ, ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ಲಕ್ಷ್ಯದ ಕಾರ್ಯವೈಖರಿ ನೇರವಾಗಿ ಪ್ರಶ್ನಿಸುವ ಅವಕಾಶವೂ ಸೃಷ್ಠಿಯಾಗಿದೆ.
Follow Us

- ಪರೀಕ್ಷೆ-ಮೌಲ್ಯ ನಿರ್ಣಯ ಮಂಡಳಿ ಕಾರ್ಯವೈಖರಿಗೆ ಚನ್ನಗಿರಿ ತಾಲೂಕಿನ ವಿದ್ಯಾರ್ಥಿಗಳು, ಪೋಷಕರ ಹಿಡಿಶಾಪ

- - -

ಬಾ.ರಾ.ಮಹೇಶ್, ಚನ್ನಗಿರಿ

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನಲ್ಲಿ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮವಾಗಿ ಪ್ರಕಟಗೊಂಡ ಫಲಿತಾಂಶಗಳಲ್ಲಿ ಪಾಸ್ ಆಗಬೇಕಿದ್ದ ಕೆಲ ಶಾಲೆಗಳ ವಿದ್ಯಾರ್ಥಿಗಳು ಫೇಲ್ ಆಗಿದ್ದರು. ಆದರೆ, ಮರುಮೌಲ್ಯಮಾಪನ ನಡೆದ ಹಿನ್ನೆಲೆ ಈಗ ಅಚ್ಚರಿಯ ಬೆಳವಣಿಗೆ ನಡೆದಿದೆ. ಅಲ್ಲದೇ, ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ಲಕ್ಷ್ಯದ ಕಾರ್ಯವೈಖರಿ ನೇರವಾಗಿ ಪ್ರಶ್ನಿಸುವ ಅವಕಾಶವೂ ಸೃಷ್ಠಿಯಾಗಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಾಗ ಚನ್ನಗಿರಿ ಪಟ್ಟಣದ ನವಚೇತನ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದರು. ಈ ವಿದ್ಯಾರ್ಥಿಗಳ ಪೋಷಕರು ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಗಳನ್ನು ತರಿಸಿಕೊಂಡು ಪರಿಶೀಲಿಸಿದ್ದಾರೆ. ಆಗ ಈ 8 ವಿದ್ಯಾರ್ಥಿಗಳೂ ಉತ್ತಿರ್ಣರಾಗಿದ್ದು ಬೆಳಕಿಗೆ ಬಂದಿದೆ.

ಎಲ್ಲೆಲ್ಲಿ ಫಲಿತಾಂಶ ಲೋಪ?:

ಇಷ್ಟೇ ಅಲ್ಲದೇ, ಚನ್ನಗಿರಿ ಸರ್ಕಾರಿ ಪ್ರೌಢಶಾಲೆಯ 4 ವಿದ್ಯಾರ್ಥಿಗಳು, ಬಾಲಿಕಾ ಪ್ರೌಢಶಾಲೆಯ 2 ವಿದ್ಯಾರ್ಥಿಗಳು, ನಲ್ಲೂರು ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 2 ವಿದ್ಯಾರ್ಥಿಗಳು, ದಾಗಿನಕಟ್ಟೆ ಗ್ರಾಮದ ವಾಲ್ಮೀಕಿ ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿ, ಕಂಚುಗಾರನಹಳ್ಳಿ ಪ್ರೌಢಶಾಲೆಯ 2 ವಿದ್ಯಾರ್ಥಿಗಳು, ಜಿ.ಕೆ.ಹಳ್ಳಿ ಸರ್ಕಾರಿ ಪ್ರೌಢಶಾಲೆಯ 2 ವಿದ್ಯಾರ್ಥಿಗಳು, ಚನ್ನಗಿರಿ ಮಿಲ್ಲತ್ ಪ್ರೌಢಶಾಲೆಯ 4 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 25 ವಿದ್ಯಾರ್ಥಿಗಳು ಫೇಲ್‌ ಎಂದು ರಿಸಲ್ಟ್‌ ಬಂದಿತ್ತು. ಆದರೆ, ಮರು ಮೌಲ್ಯಮಾಪನದಿಂದ ಈಗ ಇವರೆಲ್ಲರೂ ಉತ್ತಿರ್ಣರಾಗಿದ್ದಾರೆ. ಇಂಥ ಅವಾಂತರಕ್ಕೆ ಕರ್ನಾಟಕ ಪ್ರೌಢಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನದಲ್ಲಿಯ ಬೇಜವಾಬ್ದಾರಿತನ ಕಾರಣವಾಗಿದೆ.

ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಅಂಕಗಳನ್ನು ಪಡೆಯಬೇಕಾಗಿದ್ದ ವಿದ್ಯಾರ್ಥಿಗಳು ಮರು ಮೌಲ್ಯಮಾಪನದಿಂದ 622, 623 ಮತ್ತು 624 ಅಂಕಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಕೂಡ ಮರು ಮೌಲ್ಯಮಾಪನದ ಫಲಿತಾಂಶಗಳು ಬರುತ್ತಿವೆ. ಪರೀಕ್ಷಾ ಮಂಡಳಿ ಮಾಡುವಂತಹ ಅವಾಂತರಗಳು ಚನ್ನಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿವೆ. ಇನ್ನು ಇಡೀ ರಾಜ್ಯದಲ್ಲಿನ ಅನೇಕ ಪ್ರೌಢಶಾಲೆಗಳ ಫಲಿತಾಂಶದಲ್ಲಿ ಇನ್ನೆಂಥ ಎಡವಟ್ಟುಗಳಾಗಿರಬಹುದು ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಹತ್ವದ ಘಟ್ಟವಾಗಿರುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗಲು ಎಸ್ಸೆಸ್ಸೆಲ್ಸಿ ಅಂಕಗಳೇ ಆಧಾರ. ಹೀಗಿರುವಾಗ ಕಷ್ಟಪಟ್ಟು ಓದಿ, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿ, ಅನುತ್ತೀರ್ಣಗೊಳಿಸಿ ಫಲಿತಾಂಶ ಘೋಷಿಸಿರುವ ಪರೀಕ್ಷಾ ಮಂಡಳಿ ನಡೆ ಸರಿಯಲ್ಲ ಎನ್ನುತ್ತಾರೆ ನೊಂದ ವಿದ್ಯಾರ್ಥಿಗಳ ಪೋಷಕರಾದ ಮೊಹಮ್ಮದ್ ಶಪ್ರೃದ್ದೀನ್, ನಾಗರಾಜಪ್ಪ, ಚಂದ್ರಣ್ಣ, ಸುರೇಶ್ ಇತರರು.

ತಾಲೂಕಿನಲ್ಲಿ ಉತ್ತಮ ಫಲಿತಾಂಶಗಳು ಬರಬೇಕು ಎಂಬ ಉದ್ದೇಶದಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗಾಗಿ ವಿಶೇಷವಾದ ತರಗತಿಗಳನ್ನು ಮತ್ತು ರಾತ್ರಿ ಶಾಲೆಗಳನ್ನು ನುರಿತ ಸಂಪನ್ಮೂಲ ಶಿಕ್ಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೆಚ್ಚು ಶ್ರಮ ವಹಿಸಿದ್ದರು. 625ಕ್ಕೆ 625 ಅಂಕಗಳನ್ನು ಪಡೆದವರಿಗೆ ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ₹1 ಲಕ್ಷ ನಗದು ಬಹುಮಾನ ಸಹ ಘೋಷಣೆ ಮಾಡಿದ್ದರು. ಆದರೆ, ಉತ್ತರ ಪತ್ರಿಕೆ ಮೌಲ್ಯಮಾಪಕರ ಎಡಬಿಡಂಗಿ ತನದಿಂದ ಇಂತಹ ಅವಾಂತರಗಳು ನಡೆಯುತ್ತಿವೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಎಂದು ಪೋಷಕರಾದ ಶ್ರೀನಿವಾಸ್, ಮಹೇಶ್ವರಪ್ಪ, ಶಿವರಾಜ್, ಸತೀಶ್ ಕುಮಾರ್, ಬುಳ್ಳಿ ನಾಗರಾಜ್ ಹೇಳುತ್ತಾರೆ.

- - -

(ಬಾಕ್ಸ್‌) * ಏನಾದರೂ ಅನಾಹುತ ಆಗಿದ್ದಿದ್ದರೆ ಯಾರು ಹೊಣೆ? ಫಲಿತಾಂಶ ಫೇಲ್‌ ಎಂದು ಬಂದಿದ್ದು ತಿಳಿದು ವಿದ್ಯಾರ್ಥಿಗಳು ಏನಾದರೂ ಅನಾಹುತ ಮಾಡಿಕೊಂಡಿದ್ದರೆ ಇದಕ್ಕೆ ಯಾರು ಹೊಣೆ? ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಬೇಜವಾಬ್ದಾರಿತನ ತೋರಬಾರದು. ತಾಲೂಕಿನ ಕೆರೆಬಿಳಚಿ ಸರ್ಕಾರಿ ಉರ್ದು ಶಾಲೆ ವಿದ್ಯಾರ್ಥಿನಿ ಫಾತಿಮಾಗೆ ಪ್ರಥಮ ಫಲಿತಾಂಶದಲ್ಲಿ 622 ಅಂಕಗಳು ಬಂದಿದ್ದವು. ಮರುಮೌಲ್ಯಮಾಪನದಲ್ಲಿ 624 ಅಂಕಗಳು ಲಭಿಸಿ, ಈಗ ರಾಜ್ಯಕ್ಕೆ ದ್ವಿತೀಯ ಸ್ಥಾನ ನ್ನು ಪಡೆದಿದ್ದಾರೆ. ಒಂದೊಂದು ಅಂಕವೂ ವಿದ್ಯಾರ್ಥಿಗಳಿಗೆ ಮುಖ್ಯ ಎಂಬುದು ಮರೆಯಬಾರದು.

ಕೆಲ ಪ್ರಜ್ಞಾವಂತ ಪೋಷಕರು ಮರುಮೌಲ್ಯಮಾಪನ, ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಗಳನ್ನು ತರಿಸಿಕೊಂಡು ಪರಿಶೀಲಿಸಿ ಅಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಇದರಿಂದ ಅವರ ಮಕ್ಕಳ ಭವಿಷ್ಯ ರಕ್ಷಣೆಯಾಗಿದೆ. ಆದರೆ, ಗ್ರಾಮಾಂತರ ಪ್ರದೇಶಗಳ ಅವಿದ್ಯಾವಂತ ಪೋಷಕರ ಮಕ್ಕಳು ಅನುತಿರ್ಣಗೊಂಡರೆ ಅಂಥವರ ಮಕ್ಕಳ ವಿದ್ಯಾಭ್ಯಾಸ ಅಲ್ಲಿಗೇ ಮೊಟಕುಗೊಳ್ಳಲಿದೆ. ಇಂತಹ ಎಡವಟ್ಟುಗಳನ್ನು ಪರೀಕ್ಷಾ ಮಂಡಳಿ ಮಾಡದೇ ಎಚ್ಚೆತ್ತುಕೊಳ್ಳಬೇಕಾಗಿದೆ.

- - -

-23ಕೆಸಿಎನ್ಜಿ3:

ಮೌಲ್ಯಮಾಪನದ ಉತ್ತರ ಪತ್ರಿಕೆಯಲ್ಲಿ 71 ಅಂಕ ಬರುವಲ್ಲಿ 51 ಅಂಕಗಳು ನಮೂದಿಸಿರುವುದು.