ಸಾಂಬಾರು ತಯಾರಿಸಲು ತೊಗರಿ ಬೇಳೆ ಸೇವಿಸುವ ಮುನ್ನ ಹುಷಾರ್‌.. ! ಗಂಭೀರವಾಗಿ ಗಮನಿಸಿ

KannadaprabhaNewsNetwork |  
Published : Mar 16, 2025, 01:46 AM ISTUpdated : Mar 16, 2025, 09:01 AM IST
ತೊಗರಿ ಬೇಳೆ | Kannada Prabha

ಸಾರಾಂಶ

ನಿತ್ಯ ಸಾಂಬಾರು ತಯಾರಿಸಲು ಬಳಕೆಯಾಗುವ ತೊಗರಿ ಬೇಳೆಯೂ ಕಲಬೆರಕೆಯಿಂದ ಮುಕ್ತವಲ್ಲ. ಅದರಲ್ಲೂ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಪತ್ತೆಯಾಗಿದೆ.

 ಬೆಂಗಳೂರು : ನಿತ್ಯ ಸಾಂಬಾರು ತಯಾರಿಸಲು ಬಳಕೆಯಾಗುವ ತೊಗರಿ ಬೇಳೆಯೂ ಕಲಬೆರಕೆಯಿಂದ ಮುಕ್ತವಲ್ಲ. ಅದರಲ್ಲೂ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಪತ್ತೆಯಾಗಿದೆ. ಈ ಕೇಸರಿಬೇಳೆ ಸೇವನೆಯಿಂದ ಲ್ಯಾಥರಿಸಂ ಎಂಬ ಅಂಗವೈಕಲ್ಯತೆಗೆ ಕಾರಣವಾಗಬಲ್ಲ ಗಂಭೀರ ನರರೋಗ ಹಾಗೂ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆಯಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶ ಹಾಗೂ ಉತ್ತರ ಭಾರತದ ಕೆಲಕಡೆ ಹೇರಳವಾಗಿ ಬೆಳೆಯುವ ಕೇಸರಿ ಬೇಳೆಯನ್ನು ನಾಟಿ ಬೇಳೆ ಎಂದು ಹೇಳಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜತೆಗೆ ತೊಗರಿ ಬೇಳೆಯಲ್ಲೂ ಮಿಶ್ರಣ ಮಾಡಲಾಗುತ್ತಿದೆ. ಈ ವೇಳೆ ಅಸಲಿ ಬೇಳೆಗೂ, ಕಲಬೆರಕೆ ಬೇಳೆಗೂ ಇರುವ ವ್ಯತ್ಯಾಸ ಗೊತ್ತಾಗದಂತೆ ಕೇಸರಿ ಬೇಳೆಗೆ ಹಳದಿ ಬಣ್ಣ ಬರುವಂತೆ ಟಾಟ್ರಾಜಿನ್‌ (ಇ-102) ಬಣ್ಣ ಮಿಶ್ರಣ ಮಾಡಲಾಗುತ್ತಿದೆ. ಈ ಬಣ್ಣ ಕ್ಯಾನ್ಸರ್‌ ಕಾರಕ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ಬೆಲೆಗೆ ಸಿಗುವ ಕೇಸರಿ ಬೇಳೆ ತಂದು ತೊಗರಿ ಬೇಳೆಯಲ್ಲಿ ಬೆರಕೆ ಮಾಡುವ ಅಥವಾ ಕೇಸರಿ ಬೇಳೆಯನ್ನೇ ತೊಗರಿ ಬೇಳೆ ಅಥವಾ ಮಸೂರ್‌ ಬೇಳೆ ಎಂದು ಮಾರಾಟ ಮಾಡುವ ದಂಧೆ ನಮ್ಮಲ್ಲೂ ಚಾಲ್ತಿಯಲ್ಲಿದೆ ಎಂದು ಹೇಳಲಾಗಿದೆ.

ಏನಿದು ಕೇಸರಿ ಬೇಳೆ?:

ಕೇಸರಿ ಬೇಳೆ ಬಣ್ಣ ಹಾಗೂ ಆಕಾರದಲ್ಲಿ ತೊಗರಿ ಬೇಳೆಯನ್ನೇ ಹೋಲುತ್ತದೆ. ಆದರೆ ಅದು ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ಇದು ಒಂದು ಕಳೆ ಬೆಳೆಯಾಗಿದ್ದು, ಕಾಡಿನಲ್ಲಿ ಬೆಳೆಯುತ್ತದೆ. ಕೇಸರಿ ಬೇಳೆಯನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಲ್ಯಾಥರಿಸಂ ಕಾಯಿಲೆಗೆ ತುತ್ತಾಗಬಹುದು. ಎರಡೂ ಕಾಲುಗಳ ನರ ಹಾಗೂ ಮಾಂಸಖಂಡಗಳ ಮೇಲೆ ಸರಿಪಡಿಸಲಾಗದ ನ್ಯೂನತೆ ಉಂಟಾಗುತ್ತದೆ. ಇದು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕಲಬೆರಕೆ ಗುರುತಿಸುವ ಬಗೆ ಹೇಗೆ?

ನಾವು ಖರೀದಿಸುವ ಬೇಳೆ ತೊಗರಿ ಬೇಳೆಯಲ್ಲಿ ಕಲಬೆರಕೆ ಆಗಿದೆಯೇ, ಇಲ್ಲವೇ ಎಂಬುದನ್ನು ಪರೀಕ್ಷಿಸಲು ಸುಮಾರು 10 ಗ್ರಾಂ. ಬೇಳೆಯಲ್ಲಿ 25 ಮಿಲಿ ಲೀಟರ್‌ನಷ್ಟು ಶುದ್ಧ ನೀರು ಹಾಕಬೇಕು. ಅದಕ್ಕೆ 5 ಮಿಲಿ ಲೀಟರ್‌ನಷ್ಟು ಪ್ರಬಲ ಹೈಡ್ರೊಕ್ಲೋರಿಕ್‌ ಆಮ್ಲ ಹಾಕಿ ಸಣ್ಣಗೆ ಕುದಿಸಬೇಕು. ಆಗ ನೀರಿನ ಬಣ್ಣ ಬದಲಾದರೆ ಅದು ಕೇಸರಿ ಬೇಳೆ. ಜತೆಗೆ ಕೇಸರಿ ಬೇಳೆ ಇಳಿಜಾರು ತುದಿ ಹೊಂದಿದ್ದು, ಚೌಕಾಕಾರದಲ್ಲಿರುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

ಜೇನು ತುಪ್ಪದಲ್ಲೂ ರಾಸಾಯನಿಕ ಬಣ್ಣ?

ಇನ್ನು ಜೇನು ತುಪ್ಪದಲ್ಲೂ ರಾಸಾಯನಿಕ ಬಣ್ಣ ಬಳಕೆ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಆಗುತ್ತಿರುವ ವಿವಿಧ ಜೇನಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮಾದರಿಗಳ ಫಲಿತಾಂಶದ ವಿಶ್ಲೇಷಣೆ ಬಳಿಕ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ