ಮಂಡ್ಯ ವಿವಿ ಮುಚ್ಚುವ, ವಿಲೀನವಾಗುವ ಆತಂಕ ಬೇಡ: ಶಾಸಕ ಪಿ.ರವಿಕುಮಾರ್

KannadaprabhaNewsNetwork | Published : Mar 16, 2025 1:46 AM

ಸಾರಾಂಶ

ಸರ್ಕಾರ ಹೊಸ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಉಪ ಸಮಿತಿ ವಿಶ್ವ ವಿದ್ಯಾನಿಲಯಗಳ ಕುರಿತು ಇನ್ನೂ ಸರ್ಕಾರಕ್ಕೆ ವರದಿಯನ್ನೇ ಕೊಟ್ಟಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾನಿಲಯ ಮುಚ್ಚುವ, ವಿಲೀನಗೊಳ್ಳುವ ಬಗ್ಗೆ ಯಾರಿಗೂ ಆತಂಕ ಬೇಡ. ಸರ್ಕಾರದ ಮಟ್ಟದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯ ಉಳಿಸಿಕೊಳ್ಳಲು ಒತ್ತಡ ಹೇರಿದ್ದೇನೆ ಎಂದು ಶಾಸಕ ಪಿ.ರವಿಕುಮಾರ್ ಸ್ಪಪಷ್ಟಪಡಿಸಿದರು.

ನಗರದ ಮಂಡ್ಯ ವಿವಿ ಸ್ವಾಗತ ಕಮಾನು ನಿರ್ಮಾಣದ 3 ಕೋಟಿ ರು. ವೆಚ್ಚದ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರ ಹೊಸ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಉಪ ಸಮಿತಿ ವಿಶ್ವ ವಿದ್ಯಾನಿಲಯಗಳ ಕುರಿತು ಇನ್ನೂ ಸರ್ಕಾರಕ್ಕೆ ವರದಿಯನ್ನೇ ಕೊಟ್ಟಿಲ್ಲ. ಅವುಗಳ ಸಾಧಕ-ಬಾಧಕಗಳ ಕುರಿತಾದ ಚರ್ಚೆಗಳು ನಡೆಯುತ್ತಿರುವಾಗಲೇ ಹಲವು ಪ್ರತಿಭಟನೆಗಳು ನಡೆದಿವೆ. ಯಾವುದೇ ಕಾರಣಕ್ಕೂ ವಿವಿಗಳನ್ನು ಮುಚ್ಚುವುದಿಲ್ಲ ಎಂಬುದನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಯಾರಿಗೂ ಆತಂಕ ಬೇಡ ಎಂದು ಭರವಸೆ ನೀಡಿದರು.

ವಿರೋಧ ಪಕ್ಷಗಳು ಮಂಡ್ಯ ವಿವಿ ಸೇರಿದಂತೆ ರಾಜ್ಯದಲ್ಲಿ ಕೆಲವು ವಿವಿಗಳನ್ನು ಮುಚ್ಚುತ್ತಾರೆ ಎಂದೆಲ್ಲಾ ಅಪಪ್ರಚಾರ ನಡೆಸಿದ್ದಾರೆ. ಆದರೆ, ಸರ್ಕಾರ ವಿವಿ ಮುಚ್ಚುವ ಮಾತನ್ನು ಹೇಳಿಲ್ಲ, ವಿವಿಗಳ ಸ್ಥಿತಿ-ಗತಿಗಳ ಬಗ್ಗೆ ಚರ್ಚೆ ನಡೆಯುತ್ತಿವೆ ಅಷ್ಟೇ, ಮಂಡ್ಯ ವಿವಿಯನ್ನು ಮುಚ್ಚುವುದೂ ಇಲ್ಲ, ವಿಲೀನಗೊಳಿಸುವುದೂ ಇಲ್ಲ ಎಂಬ ಮಾತನ್ನು ಸರ್ಕಾರ ಮತ್ತು ಸಚಿವರು ಹೇಳಿದ್ದಾರೆ, ಈಗಾಗಲೇ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮಂಡ್ಯ ವಿವಿ ಉಳಿವಿಗೆ ಒತ್ತಡ ಹೇರಿದ್ದೇನೆ ಎಂದರು.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಮಂಡ್ಯ ವಿವಿ ಉಳಿವಿಗೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ, ಅವರಿಗೂ ಧನ್ಯವಾದ ತಿಳಿಸುತ್ತೇನೆ. ಇದರ ಭಾಗವಾಗಿ ಜರ್ಮನ್ ಶೈಲಿಯಲ್ಲಿ ಮಂಡ್ಯ ವಿವಿ ಸ್ವಾಗತ ಕಮಾನು ನಿರ್ಮಾಣ ಮಾಡಲಾಗುವುದು, ವಿವಿ ಆವರಣದಲ್ಲಿರುವ ಹೈಟೆನ್ಷನ್ ತಂತಿಯಿಂದಲೂ ತೊಂದರೆ ಆಗುತ್ತದೆ ಎಂಬುವ ಬಗ್ಗೆ ದೂರುಗಳು ಬಂದಿವೆ. ಇದರ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದರು.

ಮುಖಂಡರಾದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಕುಲಪತಿ ಶಿವಚಿತ್ತಪ್ಪ, ಸಿಂಡಿಕೇಟ್ ಸದಸ್ಯ ನಾಗರಾಜು, ಕುಲಸಚಿವರಾದ ವೀಣಾ, ಯೋಗನರಸಿಂಹಸ್ವಾಮಿ, ಪ್ರಾಂಶುಪಾಲೆ ಸ್ವರ್ಣಾ, ನಗರಸಭೆ ಸದಸ್ಯ ಗೀತಾ ಕುಮಾರಸ್ವಾಮಿ, ಶಿವಪ್ರಕಾಶ್ ಭಾಗವಹಿಸಿದ್ದರು.ಮಂಡ್ಯ ವಿವಿಗೆ ಶಕ್ತಿ ತುಂಬ ಕೆಲಸ ಮಾಡದ ಜೆಡಿಎಸ್: ಸಚಿವ ಎನ್.ಚಲುವರಾಯಸ್ವಾಮಿ

ಕನ್ನಡಪ್ರಭ ವಾರ್ತೆ ನಾಗಮಂಗಲ

ಜೆಡಿಎಸ್‌ನವರು ಅಧಿಕಾರದಲ್ಲಿದ್ದಾಗ ಮಂಡ್ಯ ವಿಶ್ವವಿದ್ಯಾಲಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಜಿಲ್ಲೆಗೆ ಅವಶ್ಯಕತೆ ಇರುವ ಯಾವೊಂದು ಯೋಜನೆಯನ್ನೂ ತರಲಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ದೂರಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಮಂಡ್ಯ ವಿಶ್ವವಿದ್ಯಾಲಯ ಮುಂದುವರಿಯಬೇಕೋ, ಬೇಡವೋ ಎಂಬ ವಿಷಯದಲ್ಲಿ ಜೆಡಿಎಸ್‌ನವರು ರಾಜಕೀಯ ಮಾಡುತ್ತಾರೆ. ಆದರೆ, ನಾವು ಇರುವ ವಾಸ್ತವದ ಬಗ್ಗೆ ವರದಿ ಸಂಗ್ರಹಿಸಿ ಮಂಡ್ಯ ವಿವಿ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದರು.

ಜೆಡಿಎಸ್‌ನವರು ರಾಜಕೀಯ ತೀಟೆಗೋಸ್ಕರ ಕಾಲೆಳೆಯುವ ಕೆಲಸ ಮಾಡುತ್ತಾರೆ. ನಾವು ಜಿಲ್ಲೆಯ ಜನತೆಗೆ ಬೇಕಿರುವುದನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.

ಬಾಗಲಕೋಟೆಯ ತೋಟಗಾರಿಕೆ ಕಾಲೇಜನ್ನು ಮಂಡ್ಯ ಕೃಷಿ ವಿವಿಗೆ ಸೇರಿಸುವ ವಿಚಾರದಲ್ಲಿ ವರದಿ ನೀಡುವಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಬರುವವರೆಗೂ ಬಾಗಲಕೋಟೆ ತೋಟಗಾರಿಕೆ ಕಾಲೇಜನ್ನು ಹೊರತುಪಡಿಸಿ ಇನ್ನುಳಿದಂತೆ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಎಲ್ಲಾ ಕಾಲೇಜುಗಳು ಇಲ್ಲಿಗೆ ಬರುವುದರಿಂದ ಮಂಡ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯವೇ ಆಗುತ್ತದೆ ಎಂದರು.

Share this article