ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಕಾಲೇಜಿನ ಚರಿತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ 40ಕ್ಕೂ ಹೆಚ್ಚಿನ ಅಡುಗೆಗಳನ್ನು ಒಲೆ ಮತ್ತು ಕಟ್ಟಿಗೆಗಳನ್ನು ಬಳಸಿ ತಯಾರಿಸಿದರು. ಮುಂಜಾನೆಯ ೭.೩೦ಕ್ಕೆ ಸರಿಯಾಗಿ ಪ್ರಾರಂಭಗೊಂಡ ಅಡುಗೆಯು ೧೨.೩೦ಕ್ಕೆ ಸರಿಯಾಗಿ ಕೊನೆಗೊಂಡಿತು. ಈ ಅದ್ದೂರಿಯಾದ ಭೋಜನ ಕೂಟವನ್ನು ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಮತ್ತು ಹಳೆ ವಿದ್ಯಾರ್ಥಿಯಾದ ಶಾನ್ ಅಂದಾರೆ ಅವರು ವಿದ್ಯಾರ್ಥಿಗಳು ತಯಾರಿಸಲ್ಪಟ್ಟ ಸಿಹಿ ತಿಂಡಿಯನ್ನು ಹಂಚಿಕೊಳ್ಳುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ತರಗತಿಯ ಹೊರಗಡೆಯ ಪ್ರಾಯೋಗಿಕ ಕಲಿಕೆಗೆ ಪೂರಕವಾದ ಕಾರ್ಯಕ್ರಮ ಎಂಬ ಸಂದೇಶವನ್ನು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೈಲೆಟ್ ಮಥಾಯಸ್, ವಿದ್ಯಾರ್ಥಿಗಳಿಗೆ ನೀಡಿದರು.ಆಹಾರ ಹಬ್ಬದ ಮೆರುಗನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಮಿಂಚು ನೃತ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಬೋಧಕರು, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರವಿನಂದನ್ ಭಟ್, ಅನಿಲ್ ದಾಂತಿ ಹಾಗೂ ಕಾಲೇಜಿನ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.