ಕೆಂಪನಹಳ್ಳಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅನ್ನ, ಆರೋಗ್ಯ, ಶಿಕ್ಷಣ ಇವು ವ್ಯಾಪಾರದ ಸರಕಾಗದೆ ದಾನವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಜನರ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಲಿ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಕೆಂಪನಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಈ ಎರಡನ್ನು ಲಾಭದ ದೃಷ್ಟಿ ಯಲ್ಲಿ ನೋಡುತ್ತಿರುವುದು ವಿಷಾಧನೀಯ. ಬಡವರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ತುರ್ತು ಚಿಕಿತ್ಸೆ ನೀಡಲು ನಮ್ಮ ಕ್ಲಿನಿಕ್ ಅವಶ್ಯಕತೆ ಇದೆ ಎಂದರು.ಜಿಲ್ಲೆಗೆ ಒಟ್ಟು 8 ನಮ್ಮ ಕ್ಲಿನಿಕ್ ಮಂಜೂರಾಗಿದ್ದು, ಈ ಪೈಕಿ 3 ಚಿಕ್ಕಮಗಳೂರು ನಗರದ ವಿವಿಧೆಡೆ ತೆರೆಯಲಾಗುವುದು. ಇಂದು ಕೆಂಪನಹಳ್ಳಿಯಲ್ಲಿ ಉದ್ಘಾಟನೆಯಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹಾಗೂ ಉಪ್ಪಳ್ಳಿಯಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.ಜನರ ಆರೋಗ್ಯ ಕಾಪಾಡುವಂತೆ ಜನಪ್ರತಿನಿಧಿಗಳಾದ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆಯೇ ಹೊರತು ಖಾಸಗಿ ನರ್ಸಿಂಗ್ ಹೋಂಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.ಬಡವರು ವಾಸಿಸುತ್ತಿರುವ ಬಡಾವಣೆಗಳನ್ನು ಗುರುತಿಸಿ ಈ ಭಾಗದಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸುತ್ತಿರುವ ಉದ್ದೇಶ ಬಡವರಿಗೆ ತಕ್ಷಣ ತುರ್ತು ಚಿಕಿತ್ಸೆ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ ಎಂದು ಹೇಳಿದರು.ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ದಾದಿಯರು ನಗುಮುಖದಿಂದ ರೋಗಿಗಳ ಸೇವೆ ಮಾಡಬೇಕೆಂದು ಸೂಚಿಸಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಸುಮಾರು ₹300 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ಎಂಟು ತಿಂಗಳ ಒಳಗೆ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕ್ಲಿನಿಕ್‌ನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಎಲ್ಲರಿಗೂ ಆರೋಗ್ಯ, ಶಿಕ್ಷಣ ದೊರೆಯ ಬೇಕೆಂಬ ಉದ್ದೇಶದಿಂದ ಸರ್ಕಾರ ಕ್ಲಿನಿಕ್ ಆರಂಭಿಸುತ್ತಿದೆ. ರೋಗದ ಉಪಶಮನಕ್ಕೆ ಹಾಗೂ ರೋಗಿಗಳ ನೆರವಿಗೆ ನಮ್ಮ ಕ್ಲಿನಿಕ್ ನೆರವಾಗುತ್ತವೆ ಎಂದರು.ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾದಾಗ ಪೊಲೀಸ್ ಠಾಣೆ ಆರಂಭಿಸುತ್ತಾರೆ. ಎಲ್ಲರೂ ರೋಗಗಳಿಂದ ಮುಕ್ತವಾದರೆ ಶಾಶ್ವತ ಪರಿಹಾರ ದೊರಕಿದಂತಾಗುತ್ತಿದ್ದು, ಆಸ್ಪತ್ರೆಗಳ ಸಂಖ್ಯೆ ಕಡಿಮೆಯಾಗ ಬೇಕಾದರೆ ಇದಕ್ಕೆ ಜೀವನ ಪದ್ಧತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದು ತಿಳಿಸಿದರು.ಹಿಂದೆ ಕಾಲ್ನಡಿಗೆಯಲ್ಲಿ, ಎತ್ತಿನಗಾಡಿಯಲ್ಲಿ ಹೋಗುತ್ತಿದ್ದಾಗ ಜನ ಹೆಚ್ಚು ಸುಖಿಯಾಗಿದ್ದರು. ಈಗ ಬಿಪಿ, ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರಣ ವಾಹನಗಳಲ್ಲಿ ಓಡಾಟ, ಸುಖ ಜೀವನ ನಡೆಸುತ್ತಿರುವುದು ಎಂದು ವಿಷಾಧಿಸಿದರು.ಒತ್ತಡದ ಬದುಕು ಕಾಯಿಲೆಗಳಿಗೆ ಮಾರಕ. ಈ ನಿಟ್ಟಿನಲ್ಲಿ ಸರ್ವರಿಗೂ ಒತ್ತಡ ಮುಕ್ತ ಬದುಕು ಅಗತ್ಯವಾಗಿದ್ದು, ಜಗತ್ತು ನಮ್ಮ ತಲೆ ಮೇಲೆ ಬಿದ್ದಿದೆ ಎಂಬ ಭ್ರಮೆ ಬಿಡಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಸುಜಾತಾ ಶಿವಕುಮಾರ್, ಸದಸ್ಯರಾದ ಲಲಿತಾಬಾಯಿ, ಲಕ್ಷ್ಮಣ್, ಕೆ.ಆರ್. ಮಂಜುಳಾ, ಬಿ.ಎಚ್. ಹರೀಶ್, ಡಿಎಚ್‌ಓ ಡಾ. ಅಶ್ವಥ್‌ಬಾಬು, ಎಚ್.ಪಿ ಮಂಜೇಗೌಡ, ಎಂ.ಸಿ.ಶಿವಾನಂದಸ್ವಾಮಿ, ಪ್ರಕಾಶ್, ಪೌರಾಯುಕ್ತ ಬಿ.ಸಿ.ಬಸವರಾಜು, ಡಾ.ಶಶಿಕಲಾ, ಡಾ. ಪ್ರತ್ಯಕ್ಷ ಭೈರವ, ಡಾ.ಭರತ್‌ಕುಮಾರ್ ಉಪಸ್ಥಿತರಿದ್ದರು. 28 ಕೆಸಿಕೆಎಂ 4ಚಿಕ್ಕಮಗಳೂರಿನ ಕೆಂಪನಹಳ್ಳಿಯಲ್ಲಿ ತೆರೆಯಲಾದ ನಮ್ಮ ಕ್ಲಿನಿಕ್ ಅನ್ನು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೋಮವಾರ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಎಂ.ಸಿ. ಶಿವಾನಂದಸ್ವಾಮಿ, ಡಿಎಚ್‌ಓ ಡಾ. ಅಶ್ವಥ್‌ಬಾಬು ಇದ್ದರು.