ಉಜ್ವಲ ಭವಿಷ್ಯಕ್ಕೆ ಆಹಾರ, ಆರೋಗ್ಯ, ಆಧ್ಯಾತ್ಮ ಅಗತ್ಯ: ರಂಭಾಪುರಿ ಶ್ರೀ

KannadaprabhaNewsNetwork | Published : Mar 22, 2024 1:00 AM

ಸಾರಾಂಶ

ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಶೇ.70ರಷ್ಟು ರೈತರಿದ್ದಾರೆ. ಮನುಷ್ಯನ ಉಜ್ವಲ ಭವಿಷ್ಯಕ್ಕೆ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಅಗತ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಯುಗಮಾನೋತ್ಸವದಲ್ಲಿ ಸಾವಯವ ಕೃಷಿ ಒಂದು ಚಿಂತನ ಗೋಷ್ಠಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಶೇ.70ರಷ್ಟು ರೈತರಿದ್ದಾರೆ. ಮನುಷ್ಯನ ಉಜ್ವಲ ಭವಿಷ್ಯಕ್ಕೆ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಅಗತ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಗುರುವಾರ ನಡೆದ ಸಾವಯವ ಕೃಷಿ ಒಂದು ಚಿಂತನ ಗೋಷ್ಠಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಬರಡಾಗುತ್ತಿವೆ. ರಾಸಾಯನಿಕ ಬಳಸಿ ಬೆಳೆದ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತವೆ. ಸತ್ವಭರಿತ ಬೆಳೆ ಬೆಳೆಯಬೇಕಾದರೆ ಸಾವಯವ ಕೃಷಿ ಅವಶ್ಯಕತೆಯಿದೆ. ಉದ್ಯಮ ಕ್ಷೇತ್ರಕ್ಕೆ ಕೊಡುವ ಸಹಕಾರವನ್ನು ಸಾವಯವ ಕೃಷಿ ಮಾಡುವ ರೈತನಿಗೆ ಕೊಟ್ಟರೆ ಅದ್ಭುತ ಸಾಧನೆ ಮಾಡಲು ಸಾಧ್ಯ. ಮನುಷ್ಯ ಸ್ವೀಕರಿಸುವ ಆಹಾರ ವಸ್ತುಗಳು ಕಲಬೆರಕೆಯಿಂದ ಕಲುಷಿತಗೊಂಡಿವೆ. ಭೂಮಿ ಫಲವತ್ತಾಗಲು ಸಾವಯವ ಕೃಷಿಯನ್ನು ರೈತರು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದಾಗ ಯೋಗ್ಯ ಬೆಲೆಯನ್ನು ಸರ್ಕಾರ ದೊರಕಿಸಿಕೊಟ್ಟರೆ ರೈತರ ಬಾಳು ಉಜ್ವಲಗೊಳ್ಳಲು ಸಾಧ್ಯ. ರೈತರ ಹೆಸರಿನಲ್ಲಿ ಅದೆಷ್ಟೋ ಸಂಘಟನೆಗಳಿದ್ದರೂ ನಿಶ್ಚಿತ ಫಲ ಪಡೆಯಲು ಸಾಧ್ಯವಾಗುತ್ತಿಲ್ಲ. ದೇಶವನ್ನು ಕಾಯುವ ಸೈನಿಕ ಮತ್ತು ಅನ್ನ ಕೊಡುವ ರೈತನನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜ್ ಮಾತನಾಡಿ, ರೈತರ ಸಂಕಷ್ಟ ಬಹಳಷ್ಟಿವೆ. ಶ್ರಮದಿಂದ ದುಡಿಯುವ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಕಾಲಕ್ಕೆ ಮಳೆ, ಉತ್ತಮ ಬೆಳೆಯಿಲ್ಲದೇ, ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗದಂತಾಗಿ ರೈತ ಸಾಲದಲ್ಲಿ ಸಿಲುಕಿ ನಲುಗುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಗಮನ ಹರಿಸಿ ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ರು ಮಾತನಾಡಿ, ಪಶು ಸಂಗೋಪನೆಯಿಂದ ಬಹಳಷ್ಟು ಪ್ರಯೋಜನವಿದೆ. ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಭೂಮಿ ಸತ್ವ ಸಮೃದ್ಧಿಗೊಂಡು ಉತ್ತಮ ಬೆಳೆ ಬರಲಿದೆ. ಕೃಷಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಪರ ಯೋಜನೆಗಳಿವೆ. ಅವುಗಳ ಪ್ರಯೋಜನವನ್ನು ರೈತರು ಪಡೆಯುವಂತಾಗಬೇಕು ಎಂದರು.

ಕೃಷಿ ತಜ್ಞ ಚಂದ್ರಶೇಖರ ನಾರಣಾಪುರ ಮಾತನಾಡಿ, ನೈಸರ್ಗಿಕ ಕೃಷಿ ಮಾಡುವ ರೈತ ಎದೆಗುಂದಬಾರದು. ನೈಸರ್ಗಿಕ ಕೃಷಿಯಿಂದ ಮೊದಲು ಹೆಚ್ಚು ಬೆಳೆ ಬೆಳೆಯಲು ಸಾಧ್ಯವಿಲ್ಲ. ಕ್ರಮೇಣ ಭೂಮಿ ಫಲವತ್ತತೆ ಹೆಚ್ಚಾಗಿ ಉತ್ತಮ ಬೆಳೆಸಿಗಲಿದೆ. ಅಲ್ಪ ಭೂಮಿಯಲ್ಲಿ ಒಳ್ಳೆ ಫಸಲು ಬೆಳೆಯಲು ಸಾಧ್ಯವೆಂಬುದನ್ನು ಸ್ವತಃ ನಾನು ಕೃಷಿ ಮಾಡಿ ಯಶಸ್ವಿಯಾಗಿದ್ದೇನೆ ಎಂದರು.

ಎಡೆಯೂರು ರೇಣುಕ ಶಿವಾಚಾರ್ಯರು, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಸೇರಿದಂತೆ ವಿವಿಧ ಶಾಖಾ ಮಠಗಳ ಶಿವಾಚಾರ್ಯರು ಉಪಸ್ಥಿತರಿದ್ದರು. ಪ್ರಮುಖರಾದ ಕೂಡ್ಲಿಗೆರೆ ಎಸ್.ಹಾಲೇಶ, ಉಷಾ, ಚಂದ್ರಶೇಖರ ನಿಟ್ಟೂರು, ರೇಣುಕಾ, ಪ್ರಸನ್ನ ಕುಮಾರ್, ತವಡೆಹಳ್ಳಿ, ದಿವ್ಯಶ್ರೀ, ಶಂಕರ ಮೋಹನ್ ಶಂಕರನಹಳ್ಳಿ ಅವರಿಗೆ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಆಶೀರ್ವದಿಸಿದರು. ೨೧ಬಿಹೆಚ್‌ಆರ್ ೬:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾವಯವ ಕೃಷಿ ಒಂದು ಚಿಂತನ ಗೋಷ್ಠಿಯನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜ್ ಉದ್ಘಾಟಿಸಿದರು. ರಂಭಾಪುರಿ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು.

Share this article