ಭೋಜನವೆಂದರೆ ಅದ್ವೈತ ಸಾಧನೆ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Aug 07, 2026, 02:45 AM IST
ಪಾಲ್ಗೊಂಡ ಶಿಷ್ಯವೃಂದ  | Kannada Prabha

ಸಾರಾಂಶ

ಭೋಜನವೆಂದರೆ ಅದು ಅದ್ವೈತ ಸಾಧನೆಯಾಗಿದ್ದು, ಊಟ ಮಾಡಿದ ಆಹಾರ ನಮ್ಮೊಳಗೆ, ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ, ಅದು ನಾವೇ ಆಗಿ ರೂಪುಗೊಳ್ಳುತ್ತದೆ.

ನಮ್ಮೊಳಗೆ ಒಂದಾಗದೇ ಇರುವ ಆಹಾರವೇ ನಮಗೆ ಶತ್ರು

ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಕನ್ನಡಪ್ರಭ ವಾರ್ತೆ ಗೋಕರ್ಣ

ಭೋಜನವೆಂದರೆ ಅದು ಅದ್ವೈತ ಸಾಧನೆಯಾಗಿದ್ದು, ಊಟ ಮಾಡಿದ ಆಹಾರ ನಮ್ಮೊಳಗೆ, ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ, ಅದು ನಾವೇ ಆಗಿ ರೂಪುಗೊಳ್ಳುತ್ತದೆ. ಮೊದಲು ಆಹಾರವೇ ಬೇರೆ ನಾವೇ ಬೇರೆಯಾಗಿರುತ್ತೇವೆ. ಆದರೆ ನಾವು ಸ್ವೀಕರಿಸಿದ ಆಹಾರ ಕಾಲಕ್ರಮೇಣ ಪ್ರತ್ಯೇಕತೆಯನ್ನು ಕಳೆದುಕೊಂಡು ನಾವೇ ಆಗಿ ನಮ್ಮಲ್ಲಿ ಒಂದಾಗುತ್ತದೆ. ನಮ್ಮ ಜನ್ಮವೂ ಹಾಗೆಯೇ, ಭೂಮಿಯಲ್ಲಿ ಎಲ್ಲಾ ಕರ್ಮಗಳನ್ನು ಕಳೆದುಕೊಂಡು, ಆನಂತರ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಪರಮ ಗುರಿಯಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಜೀವ-ದೇವಾದ್ವೈತಕ್ಕೆ ಭೋಜನವೆಂಬುದು ತಯಾರಿಯಾಗಿದ್ದು, ಇದು ಜೀವ-ಜೀವಾದ್ವೈತವಾಗಿದೆ. ಅದ್ವೈತವಿರುವಲ್ಲಿ ಆನಂದವಿದ್ದು, ಜೀವ-ಜೀವಾದ್ವೈತವಾದ ಭೋಜನವನ್ನು ಸವಿಯುವಾಗಲೂ ಆನಂದವಾಗುತ್ತದೆ. ಸೇವಿಸುವ ಆಹಾರ ನಮ್ಮೊಳಗೆ ಅದ್ವೈತವಾಗದೇ, ನಮ್ಮೊಳಗೆ ಒಂದಾಗದೇ ಇದ್ದಾಗ ಅದೇ ನಮಗೆ ಶತ್ರುವಾಗುತ್ತದೆ. ಅದೇ ಅನಾರೋಗ್ಯಕ್ಕೂ, ಮರಣಕ್ಕೂ ಕಾರಣವಾಗಬಹುದು. ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು. ಅದಿಲ್ಲದಿದ್ದರೆ ಆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ. ಆಯುರ್ವೇದದ ಸೂತ್ರವೂ ಇದನ್ನೇ ಹೇಳುತ್ತದೆ. ಜೀರ್ಣವಾಗದೇ ಉಳಿಯುವ ಆಹಾರವೇ ಸರ್ವ ರೋಗಕ್ಕೂ ಮೂಲ ಎನ್ನಲಾಗಿದೆ ಎಂದು ಅಭಿಪ್ರಾಯಪಟ್ಟರು.

ಭೋಜನದಲ್ಲಿ ಜೀವ-ಜೀವ ಸೇರಿದರೆ, ಜೀವನದಲ್ಲಿ ಜೀವ-ದೇವ ಸೇರುವುದಾಗಿದೆ. ಸೇವಿಸಿದ ಆಹಾರ ಸಂಪೂರ್ಣ ಜೀರ್ಣವಾಗಿ ದೇಹದ ಭಾಗವಾದರೆ ಅದು ಭೌತಿಕ ಅದ್ವೈತ. ಆದರೆ ಅನ್ನಂಬ್ರಹ್ಮ ಎಂಬ ಭಾವದಲ್ಲಿ ಸೇವಿಸಿದಾಗ ಅದು ಉನ್ನತ ಮಟ್ಟದ ಅದ್ವೈತವಾಗಿದ್ದು, ಅದು ನಮ್ಮನ್ನು ಮುಕ್ತಿಗೇ ಕರೆದುಕೊಂಡು ಹೋಗುವ ಸಾಧನವಾಗುತ್ತದೆ. ಹಾಗೆಯೇ ಮಣ್ಣು ಮರಳುಗಳನ್ನು ಸೇವಿಸಿ ಜೀವನ ಮಾಡಲಾಗದು. ನಾವು ಸೇವಿಸುವ ಆಹಾರಕ್ಕೆ ಜೀವವಿದ್ದು, ಗಿಡಗಳಿಗೆ ಸುಪ್ತವಾದ ಜೀವವಿದೆ. ಅದಕ್ಕೆ ಸಂವೇದನೆಯೂ ಇದೆ. ಒಂದಾಗುವ ವಸ್ತುಗಳಲ್ಲಿ ಸಮಾನತೆ ಬೇಕು ಎಂಬುದು ಸೃಷ್ಟಿಯ ನಿಯಮ. ಹಾಗಾಗಿ ಜಡ ವಸ್ತುವು ಜೀವಕ್ಕೆ ಆಹಾರವಾಗಲು ಸಾಧ್ಯವಿಲ್ಲ. ಜೀವಕ್ಕೆ ಜೀವವಿರುವ ವಸ್ತುವೇ ಆಹಾರವಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭ ಧಾರ್ಮಿಕ ಪಂಚಾಂಗ ಸಮಿತಿಯ ಪ್ರೊ. ಶಂಭು ಭಟ್ಟ ಕಡತೋಕ ಹಾಗೂ ವಿದ್ವಾನ್ ಪತಂಜಲಿ ವೀಣಾಕರ ಪ್ಲವಂಗ ನಾಮ ಸಂವತ್ಸರದ ಧಾರ್ಮಿಕಪಂಚಾಂಗದ ಕರಡು ಪ್ರತಿಯನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.

ಸಾಗರ ಹವ್ಯಕ ಮಂಡಲದ ಕೆಳದಿ ಪಶ್ಚಿಮ, ಕೆಳದಿ ಪೂರ್ವ, ಉಳವಿ, ಕ್ಯಾಸನೂರ, ಇಕ್ಕೆರಿ, ಆವಿನಳ್ಳಿ ವಲಯಗಳ ಪರವಾಗಿ ರಮೇಶ ಹಾರೆಗೊಪ್ಪ ದಂಪತಿ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಚಿಪ್ಳಿ, ರಾಘವೇಂದ್ರ ಹೊಡಬಟ್ಟೆ, ಗೋವಿಂದ ಹೆಗಡೆ, ನಿಖಿಲ್ ಭಟ್, ದಿನ ಪ್ರಧಾನರಾಗಿ ಗಣಪತಿ ಟಿ.ಆರ್. ವರದಾಮೂಲ ದಂಪತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಮಾಡಿ ಚರ್ಚ್ ವಾರ್ಷಿಕೋತ್ಸವ: ನೊವೆನಾ ಪ್ರಾರ್ಥನೆಗೆ ಚಾಲನೆ
ಪಿಂಚಣಿ ರದ್ದು, ವಿಧಾನಸಭೆಯಲ್ಲಿ ಪ್ರಸ್ತಾಪ: ಯಶ್‌ಪಾಲ್ ಸುವರ್ಣ